ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳ ಮಧ್ಯೆ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್ ಯೋಜನೆಯಿಂದ ಆಗುತ್ತಿರುವ ಅನಾಹುತಗಳು ಒಂದೆರಡಲ್ಲ. ಪ್ರತಿನಿತ್ಯ ಈ ಚಿಗರಿ ಬಸ್‌ಗಳಿಂದ ಏನಾದರೊಂದು ಅನಾಹುತ ಆಗುತ್ತಲೇ ಇರುತ್ತದೆ. ಈಗ ಚಿಗರಿ ಬಸ್ ಮತ್ತೆ ಪಾದಚಾರಿಯೊಬ್ಬರಿಗೆ ಗುದ್ದಿ ಸುದ್ದಿ ಮಾಡಿದೆ.
ಎಸ್, ಧಾರವಾಡದ ನವಲೂರು ಬ್ರಿಡ್ಜ್ ಬಳಿ ಚಿಗರಿ ಬಸ್ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ಆ ಪಾದಚಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಸದ್ಯ ಆತನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಗರಿ ಬಸ್‌ನಿಂದ ಆದ ಈ ಅನಾಹುತ ವಿರೋಧಿಸಿ ಅಲ್ಲಿ ಸಾರ್ವಜನಿಕರು ದಿಢೀರ್ ರಸ್ತೆಗಿಳಿದು ಬಿಆರ್‌ಟಿಎಸ್ ರಸ್ತೆಯನ್ನೇ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ಗಂಟೆಯಿಂದ ಸಾರ್ವಜನಿಕರು ರಸ್ತೆ ಬಂದ್ ಮಾಡಿ ಬಿಆರ್‌ಟಿಎಸ್ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಯೋಜನೆಯನ್ನು ರದ್ದು ಮಾಡಬೇಕು ಎಂದು ಪಟ್ಟು ಹಿಡಿದು ಕುಳಿತ ಪ್ರಸಂಗ ನಡೆಯಿತು.
ರಸ್ತೆ ಬಂದ್ ಮಾಡಿದ್ದರಿಂದ ಸಂಚಾರ ದಟ್ಟನೆ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸಲಿಲ್ಲ. ಸುಮಾರು ಗಂಟೆಗಳ ಕಾಲ ಈ ಪ್ರತಿಭಟನೆ ನಡೆಯಿತು.