ವಿಜಯಸಾಕ್ಷಿ ಸುದ್ದಿ, ಗದಗ: ವ್ಯಕ್ತಿಯ ವ್ಯಕ್ತಿತ್ವ ಪೂರ್ಣ ಪ್ರಮಾಣದಲ್ಲಿ ವಿಕಸನವಾಗುವಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಯಲ್ಲಿ ತೊಡಗುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಭಿಪ್ರಾಯಪಟ್ಟರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ ಇವರ ಸಹಯೋಗದಲ್ಲಿ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಗದಗ-ಬೆಟಗೇರಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ `ರಾಷ್ಟ್ರೀಯ ಕ್ರೀಡಾ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಾಕಿ ಕ್ರೀಡೆಯನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಗದಗ ಜಿಲ್ಲೆಯ ಹಾಕಿ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿ ಪ್ರಶಸ್ತಿ ಪಡೆದಿದ್ದಾರೆ. ಹಾಕಿ, ಕುಸ್ತಿ ಮತ್ತು ಸೈಕ್ಲಿಂಗ್ ಪಂದ್ಯಾವಳಿಗಳು ಮೂರು ದಿನಗಳ ಕಾಲ ನಡೆಯಲಿವೆ. ಹಾಕಿ ಪಂದ್ಯಾವಳಿ ಆಗಸ್ಟ್ 29ರಂದು ಮಹಾತ್ಮ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ 4 ತಂಡಗಳಿಂದ ಮೂರು ಪಂದ್ಯಗಳು ನಡೆಯಲಿವೆ. ಕುಸ್ತಿ ಪಂದ್ಯಾವಳಿಗಳು ಆಗಸ್ಟ್ 30ರಂದು ಬೆಳಿಗ್ಗೆ 10.30 ಗಂಟೆಗೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ನಡೆಯಲಿದೆ. ಸೈಕ್ಲಿಂಗ್ ಜಾಥಾವು ಆಗಸ್ಟ್ 31ರ ಬೆಳಿಗ್ಗೆ 10.30ಕ್ಕೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಶ್ರೀ ಬಸವೇಶ್ವರ ಪುತ್ಥಳಿಯವರೆಗೆ ಜರುಗಲಿದೆ ಎಂದು ತಿಳಿಸಿದರು.
ಗದಗ-ಬೆಟಗೇರಿಯ ಶ್ರೀ ಹನುಮಾನ್ ಬ್ಲೆಸ್ಸಿಂಗ್ ಕ್ಲಬ್ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು, ಸೈಕ್ಲಿಂಗ್ ಮತ್ತು ಕುಸ್ತಿ ಅಸೋಸಿಯೇಷನ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಪ್ರಾರ್ಥಿಸಿದರು. ಪ್ರಾಧ್ಯಾಪಕ ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ನಗರಸಭೆ ಸದಸ್ಯರಾದ ಸುರೇಶ ಕಟ್ಟಿಮನಿ, ವೈ.ಜಿ. ಗಡಾದ, ಕೃಷ್ಣಪ್ಪ ಬಾಗಲಕೋಟೆ, ಹನುಮಂತಪ್ಪ ವೀರಾಪುರ್, ಚಂದ್ರು ಚೌಹಾನ್, ದೀಪಕ್ ಗಾಗಡೇ, ಪ್ರವೀಣ್ ಚಪ್ಪರಮನಿ, ಮಂಜುನಾಥ್ ಬಾಗಲಕೋಟಿ, ವಾಸು ಕಲ್ಕಂಬಿ, ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಅಧೀಕ್ಷಕ ಜಗದೀಶ್ ಹೊಳ್ಳಟ್ಟಿ ಮುಂತಾದವರು ಹಾಜರಿದ್ದರು.
ಕರ್ನಾಟಕದಲ್ಲಿ ಹಾಕಿ ಎಂದರೆ ಮೊದಲ ನೆನಪಾಗುವುದು ಕೊಡಗು, ನಂತರ ಗದಗ ಜಿಲ್ಲೆಯಾಗಿದೆ. ಹಾಕಿ ಕ್ರೀಡೆಗೆ ಗದಗ ಜಿಲ್ಲೆಯ ಕೊಡಗೆ ಅಪಾರವಾಗಿದೆ. ಕ್ರೀಡಾಪಟುಗಳು ಹಾಕಿ ಗ್ರೌಂಡ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನುಡಿದರು.