ಗದಗ:- ಕರ್ನಾಟಕ ಸೇರಿ ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ.
ಈ ಹೊತ್ತಲ್ಲೇ ಒಂದು ಅಚ್ಚರಿಯ ಘಟನೆ ನಡೆದಿದ್ದು, ಭಕ್ತಾದಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ. ಎಸ್, ಗಣೇಶನ ವಾಹನ ಇಲಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಂತೆ ನಿಜವಾದ ಇಲಿ ಗಣೇಶ ಮೂರ್ತಿಯ ಪಾದದಡಿ ಕುಳಿತ ನೈಜ ಘಟನೆ ಗದಗ ಜಿಲ್ಲೆಯ ತೋಟಗಂಟಿ ಗ್ರಾಮದಲ್ಲಿ ಜರುಗಿದೆ.
ಹೌದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ಅನ್ನದಾನೇಶ್ವರ ಯುವಕ ಮಂಡಳಿಯಿಂದ 5 ಅಡಿ ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೇ ಮೂರ್ತಿಯ ಸುತ್ತಮುತ್ತ ಇಲಿ ಮರಿಯೊಂದು ಓಡಾಡುತ್ತಿತ್ತು. ಅದನ್ನು ಎತ್ತಿಕೊಂಡು ಸಮೀಪದ ಖಾಲಿ ಜಾಗದಲ್ಲಿ ಬಿಟ್ಟರೂ ಪುನಃ ಮೂರ್ತಿಯ ಕಡೆ ಬರುತ್ತಿದೆ. ಸದ್ಯ ಇದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.
ಪ್ರತಿವರ್ಷದಂತೆ 5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ತರಲು ಹೋಗಿದ್ದಾಗ ಮೂರ್ತಿ ಜೊತೆಗೆ ಮೂಷಿಕ ಬಂದಿದ್ದು, ಅಚ್ಚರಿ ಪಡುವಂತೆ ಮಾಡಿದೆ. ಕಿನ್ನಾಳ ಗ್ರಾಮದಿಂದ ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ತರುವಾಗ ನಿಜ ಸ್ವರೂಪಿ ಮೂಷಿಕ ಬಂದಿದ್ದಾನೆ. ಅದನ್ನು ಕೈಯಲ್ಲಿ ಹಿಡಿದು, ಬೇರೆಡೆ ಬಿಟ್ಟರೂ ಹೋಗದ ಹಿನ್ನೆಲೆ, ಅದಕ್ಕೆ, ಹಣ್ಣು, ಧಾನ್ಯ ಮತ್ತು ಬೀಜದಂತಹ ಆಹಾರ ನೀಡಿ ಮೂರ್ತಿ ಬಳಿ ಓಡಾಡಲು ಗ್ರಾಮಸ್ಥರು ಬಿಟ್ಟಿದ್ದಾರೆ.
ಸದ್ಯ ಇಲಿಯು ಮೂರ್ತಿಯ ಮುಂದೆ ಕುಳಿತಿರೋದನ್ನ ನೋಡಲು ಜನತೆ ಮುಗಿಬೀಳುತ್ತಿದ್ದಾರೆ. ಮಂಟಪ ಸುತ್ತಾಟ, ಹಣ್ಣು, ಧಾನ್ಯ, ಬೀಜದಂತ ಪದಾರ್ಥ ಹಾಗೂ ತರಕಾರಿ ತಿಂದು, ಇಲಿ ಕಾಲ ಕಳಿಯುತ್ತಿದೆ. ನಂತರ ಮೂರ್ತಿಯ ಪಾದದ ಬಳಿ ಬಂದು ಕುಳಿತುಕೊಳ್ಳುತ್ತಿದೆ. ಯುವಕರು ಎತ್ತಿಕೊಂಡರು ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಗಣಪತಿಯ ವಾಹನವನ್ನು ಮರೆತು ಬಂದ ಕಾರಣಕ್ಕೆ ನಿಜವಾದ ವಾಹನ ಬಂದು ಸೇರ್ಪಡೆಗೊಂಡಿದೆ ಎಂದು ಇಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.