ಜನಪರ ಧೋರಣೆಯ Psi ಮಾರುತಿ ಜೋಗದಂಡಕರಗೆ ರಾಷ್ಟ್ರಪತಿ ಪದಕ ಪ್ರದಾನ

0
Spread the love

ಸುದೀರ್ಘ 32 ವರ್ಷಗಳ ಸೇವೆಯಲ್ಲಿ ತೋರಿದ ಪರಿಶ್ರಮ, ಜನಪರ ಧೋರಣೆ, ಅನೇಕ ಪ್ರಕರಣಗಳ ಪತ್ತೆ, ಇಲಾಖೆಗೆ ತಂದುಕೊಟ್ಟ ಗೌರವ ಹಾಗೂ ಸಮಾಜದ ವಿಶ್ವಾಸ ಇವುಗಳ ಆಧಾರದ ಮೇಲೆ ಮಾರುತಿ ಶಂಕರ ಜೋಗದಂಡಕರರು 2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾದ ಮಾರುತಿ ಶಂಕರ ಜೋಗದಂಡಕರರ ಸಾಧನೆ ಅನುಪಮವಾದದ್ದು.

Advertisement

22 ಜೂನ್ 1968ರಂದು ಗದಗನಲ್ಲಿ ಜನಿಸಿದ ಮಾರುತಿ ಶಂಕರ ಜೋಗದಂಡಕರರು ತಾಯಿಯ ಆಶ್ರಯದಲ್ಲಿ ಬಡತನವನ್ನು ಎದುರಿಸಿ ಬೆಳೆದವರು. ಬಾಲ್ಯದಲ್ಲೇ ದುಡಿಮೆ, ತಾಳ್ಮೆ ಮತ್ತು ಕಷ್ಟಸಹಿಷ್ಣುತೆಯನ್ನು ಜೀವನದ ಶ್ರೇಷ್ಠ ಪಾಠವಾಗಿ ಮಾಡಿಕೊಂಡರು. ಸಣ್ಣ ವಯಸ್ಸಿನಿಂದಲೇ ಗಾರೆ ಕೆಲಸ, ಇಟ್ಟಿಗೆ ಕಾರ್ಖಾನೆ, ಹತ್ತಿ ಮಿಲ್ ಹಾಗೂ ಆಸ್ಪತ್ರೆಗಳಲ್ಲಿ ದುಡಿದು ಕುಟುಂಬವನ್ನು ಪೋಷಿಸುವ ಜವಾಬ್ದಾರಿಯ ಜೊತೆಗೆ ವಿದ್ಯಾಭ್ಯಾಸವನ್ನೂ ಮುಂದುವರೆಸಿದರು.

ಗದಗ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಪಿಯುಸಿ ತನಕ ಅಭ್ಯಾಸ ನಡೆಸಿದರು. ಬಳಿಕ ಜಗದ್ಗುರು ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಕಾಲೇಜು ದಿನಗಳಲ್ಲಿ ಆಟೋ ರಿಕ್ಷಾ ನಡೆಸುತ್ತಾ ಬಿಎ ಪದವಿಯವರೆಗೆ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದು ಅವರ ತಾಳ್ಮೆ ಮತ್ತು ಪರಿಶ್ರಮಕ್ಕೆ ಹಿಡಿದ ಕನ್ನಡಿ.

24 ಅಕ್ಟೋಬರ್, 1993ರಂದು ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆಂಪಯ್ಯ ಅವರ ನೇಮಕಾತಿಯಲ್ಲಿ ಪೊಲೀಸ್ ಇಲಾಖೆಗೆ ಸೇರಿದರು. ಆರಂಭದಲ್ಲಿ ಪೊಲೀಸ್ ಕಾನ್ಸ್ಟೇಬಲ್/ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ, 6 ಜೂನ್ 2019ರಂದು ಎ.ಎಸ್.ಐ ಹುದ್ದೆಗೆ ಪದೋನ್ನತಿ ಪಡೆದು ಜಿಲ್ಲಾ ಅಪರಾಧ ವಿಭಾಗದಲ್ಲಿ ಸೇವೆ ಸಲ್ಲಿಸಿದರು.

ಶಿಗ್ಗಾವಿ, ಮುಂಡರಗಿ, ನರಗುಂದ, ಗದಗ ಗ್ರಾಮೀಣ ಠಾಣೆ ಹಾಗೂ ಗದಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ, ಅನೇಕ ಕ್ಲಿಷ್ಟಕರ, ಸಂವೇದನಾಶೀಲ ಮತ್ತು ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಿ ಇಲಾಖೆ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ಪಡೆದರು.

2010ರಿಂದ 2024ರವರೆಗೆ ಕ್ರೈಂ ಇನ್ ಇಂಡಿಯಾ, ಅಸ್ವಾಭಾವಿಕ ಸಾವುಗಳು, ರಸ್ತೆ ಅಪಘಾತಗಳು ಹಾಗೂ ಇತರ ಪ್ರಮುಖ ಪ್ರಕರಣಗಳ ಅಂಕಿ-ಅಂಶಗಳನ್ನು ನಿಖರವಾಗಿ ಅಳವಡಿಸಿ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಇಲಾಖೆಗೆ ಗೌರವ ತಂದರು. ಎಡಿಜಿಪಿ (ಬೆಂಗಳೂರು) ಹಾಗೂ ಐಜಿಪಿ (ಉತ್ತರ ವಲಯ, ಧಾರವಾಡ) ಅವರಿಂದ ಪ್ರಶಂಸಾ ಪತ್ರಗಳಿಗೆ ಪಾತ್ರರಾದರು. ಹಲವಾರು ಬಾರಿ ನಗದು ಬಹುಮಾನಗಳು ಹಾಗೂ `ಅತ್ಯುತ್ತಮ ಸನ್ಮಾನಿತ’ ಗೌರವ (2010ರಿಂದ 2024ರವರೆಗೆ) ಪಡೆದರು.

ಮಾರುತಿ ಶಂಕರ ಜೋಗದಂಡಕರರು ಜನಸಾಮಾನ್ಯರೊಂದಿಗೆ ಸದಾ ಹತ್ತಿರ ಬಾಂಧವ್ಯ ಕಾಪಾಡಿಕೊಂಡು, ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಣೆ ಮಾಡಡುತ್ತ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಸೊತ್ತು ಪ್ರಕರಣಗಳು ಹಾಗೂ ಅಪರಾಧ ಪತ್ತೆಯಲ್ಲಿ ನಿರಂತರ ಶ್ರೇಷ್ಠ ಸಾಧನೆಗೈದಿದ್ದಾರೆ. ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸಿ ಪಾಲ್ಗೊಂಡು ಸಮಾಜದೊಂದಿಗೆ ಒಗ್ಗಟ್ಟು ಬೆಳೆಸಿದ್ದಾರೆ.

ನಿಷ್ಠೆ, ಪ್ರಾಮಾಣಿಕತೆ ಮತ್ತು ಕರ್ತವ್ಯ ಶ್ರದ್ಧೆಯೇ ಇವರ ಬದುಕಿನ ಆಧಾರ. `ಪೊಲೀಸ್ ಸೇವೆ ಎಂದರೆ ಕೇವಲ ಕೆಲಸವಲ್ಲ, ಅದು ಸಮಾಜ ಸೇವೆ’ ಎಂಬ ತತ್ವದೊಂದಿಗೆ ಸದಾ ಜನಪರ ಧೋರಣೆಯೊಂದಿಗೆ ಕಠಿಣತೆ ಮತ್ತು ಮಾನವೀಯತೆ ಎಂಬ ಎರಡು ಮುಖಗಳನ್ನು ಸಮತೋಲನಗೊಳಿಸಿ ಕರ್ತವ್ಯ ಪಥದಲ್ಲಿ ಸಾಗಿದ್ದಾರೆ.

ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸಿ ಅನೇಕ ಸೊತ್ತು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಮಾಡಿದರು. ಪ್ರಸ್ತುತ ಗದಗ ತಾಲೂಕಿನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಅಪರಾಧ ನಿಯಂತ್ರಣದಲ್ಲಿ ಶ್ರೇಷ್ಠ ಸಾಧನೆ ತೋರಿಸುತ್ತಿದ್ದಾರೆ. ಪೋಲೀಸ್ ಇಲಾಖೆಯಲ್ಲಿನ ಸೇವಾ ನಿಷ್ಠೆ, ಶ್ರೇಷ್ಠ ಸಾಧನೆ, ಕಾರ್ಯತತ್ಪರತೆ, ನಿಖರ ಅಂಕಿ-ಅಂಶ ನಿರ್ವಹಣೆ ಮತ್ತು ಸಾರ್ವಜನಿಕರ ವಿಶ್ವಾಸಾರ್ಹತೆ ಇವುಗಳನ್ನು ಪರಿಗಣಿಸಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರು 2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಅವರ ಹೆಸರನ್ನು ಶಿಫಾರಸು ಮಾಡಿದರು.


Spread the love

LEAVE A REPLY

Please enter your comment!
Please enter your name here