ಬೆಂಗಳೂರು:“ಮನುಷ್ಯ ಧರ್ಮವನ್ನು ಮೂಲವಾಗಿಟ್ಟುಕೊಂಡು ಮೈಸೂರು ಅರಸರು ಹಾಗೂ ಅವರ ವಂಶಸ್ಥರು ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಅರಸು ಅಸೋಸಿಯೇಷನ್ ನ ಸುವರ್ಣ ಮಹೋತ್ಸವದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಅರಸು ಸಮುದಾಯವು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಈ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ಬಹು ದೊಡ್ಡದು. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಅವರು ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಕಟ್ಟೆ, ವಾಣಿವಿಲಾಸ ಸಾಗರ ಅಣೆಕಟ್ಟು, ಜೆ.ಸಿ. ಎಂಜಿನಿಯರ್ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ ಹೀಗೆ ಹಲವಾರು ಜನೋಪಕಾರಿ ಕೆಲಸಗಳಿಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರು ಅರಸರು” ಎಂದು ಕೊಂಡಾಡಿದರು.
“ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯದ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರಿನ ಒಡೆಯರು. ಇವರು ನೆಟ್ಟಿರುವ ಮರದ ಫಲವನ್ನು ನಾವೆಲ್ಲರೂ ತಿನ್ನುತ್ತಿದ್ದೇವೆ” ಎಂದರು.
ಮೀಸಲಾತಿ ಹಾಗೂ ನಿವೇಶನ ನೀಡುವ ಬಗ್ಗೆ ಚರ್ಚೆ
“ಅರಸು ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಇತರೇ ಅನುಕೂಲಗಳನ್ನು ಕಲ್ಪಿಸಿಕೊಡಬೇಕು ಎಂದು ಮುಖಂಡರುಗಳು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಸಂಘಕ್ಕೆ ನಿವೇಶನ ಬೇಕು ಎಂದು ಮನವಿ ಸಲ್ಲಿಸಿದ್ದೀರಿ. ನಾನು ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದ್ದೇನೆ. ಆದ ಕಾರಣ ಸಂಘದ ಪ್ರಮುಖರು ಹಾಗೂ ರಾಜ ವಂಶಸ್ಥರ ಜೊತೆಯಲ್ಲಿ ಚರ್ಚೆ ಮಾಡಿ ನಿಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಕೆಲಸ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ಮೈಸೂರು ಮಹಾರಾಜರು ಯಾವ ಧರ್ಮದಲ್ಲಿ ನಡೆಯಬೇಕು, ಯಾವ ಧರ್ಮವನ್ನ ಉಳಿಸಿಕೊಳ್ಳಬೇಕು ಎಂದು ಯಾವತ್ತೂ ಮಾತನಾಡಲಿಲ್ಲ. ಏಕೆಂದರೆ ಧರ್ಮ ಯಾವುದಾದರೂ ಇರಲಿ, ತತ್ವ, ನಾಮ ನೂರಾರೂ ಇದ್ದರೂ ದೈವವೊಂದೇ. ಪೂಜೆ ಹಲವಾದರೂ ಭಕ್ತಿಯೊಂದೇ, ದೇವನೊಬ್ಬ ನಾಮ ಹಲವು” ಎಂದರು.
“ನಾವುಗಳು ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಲಿಲ್ಲ. ಅರಸು ಸಮುದಾಯಕ್ಕೆ ನಾವೆಲ್ಲರೂ ಋಣಿಗಳಾಗಿರಬೇಕು. ಕರ್ನಾಟಕ ಸರ್ಕಾರದ ಪರವಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ನನ್ನ ಕ್ಷೇತ್ರದಲ್ಲಿ ಹಲವಾರು ಅರಸು ಕುಟುಂಬದವರನ್ನು ಹತ್ತಿರದಿಂದ ನೋಡಿದ್ದೇನೆ. ಬಹಳ ಸ್ವಾಭಿಮಾನದಿಂದ ಬದುಕು ನಡೆಸುತ್ತಿರುವ ಸಮುದಾಯ. ನೀವು ಸರ್ಕಾರದ ಜೊತೆ ನಿಂತು, ಬೆಂಬಲವಾಗಿರಬೇಕು” ಎಂದು ಮನವಿ ಮಾಡಿದರು.
“ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ತಂದು ಲಕ್ಷಾಂತರ ಭೂ ರಹಿತ ಬಡವರ ಪರವಾಗಿ ನಿಂತರು. ಈ ತೀರ್ಮಾನ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಒಬ್ಬ ಮನುಷ್ಯ ಯಾವಾಗ ಸಾಹುಕಾರನಾಗುತ್ತಾನೆ, ಯಾವಾಗ ಬಡವನಾಗುತ್ತಾನೆ ಎಂಬುದು ತಿಳಿಯಿವುದಿಲ್ಲ. ಅದಲು-ಬದಲು ಪ್ರಕ್ರಿಯೆ ಅನಿರೀಕ್ಷಿತ” ಎಂದರು.
“ದೇವರಾಜ ಅರಸು ಅವರಿಗೆ ಜಾತಿ ಇರಲಿಲ್ಲ. ಆದರೆ ನಾಯಕತ್ವದ ಗುಣವಿತ್ತು. ಆ ಗುಣ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿತು. ಹಿಂದುಳಿದ ಹಾಗೂ ಮೇಲ್ವರ್ಗದ ಎಲ್ಲ ರಾಜಕಾರಣಿಗಳನ್ನು ಬೆಳೆಸಿ ಭದ್ರ ಅಡಿಪಾಯ ಕೊಟ್ಟವರು ದೇವರಾಜ ಅರಸು” ಎಂದರು.
“ಹಣ, ಐಶ್ವರ್ಯ ಎಷ್ಟೇ ಇದ್ದರೂ ಸರಳತೆಯನ್ನು ಕಾಪಾಡಿಕೊಂಡವರು ಅರಸು ಸಮುದಾಯದವರು. ಸಂಪತ್ತಿಗೆ ಬೆಲೆಕಟ್ಟಬಹುದು ಆದರೆ ಸರಳತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇನ್ನೊಬ್ಬರಿಗೆ ಅನ್ಯಾಯವಾಗದ ರೀತಿಯಲ್ಲಿ ನಾವು ಬದುಕಬೇಕು. ಅದೇ ನಿಜವಾದ ಸರಳ ಧರ್ಮ” ಎಂದರು.
“ಈ ಸಮುದಾಯದ ಎಲ್ಲಾ ವಯೋಮಾನದವರ ಬಳಿ ನಾನು ಪ್ರಾರ್ಥಿಸಿಕೊಳ್ಳುವುದು ಏನೆಂದರೆ ನಿಮ್ಮಲ್ಲಿನ ಆತ್ಮಸ್ಥೈರ್ಯದ ರಕ್ತ ಕುಂದಬಾರದು. ಮಹಾರಾಜರು ಸೇರಿದಂತೆ ದೇವರಾಜ ಅರಸು ಅವರು ತಮಗೆ ತೊಂದರೆಯಾದರೂ ಸಮಾಜದ ಪರವಾಗಿ ನಿಂತವರು” ಎಂದರು.”ನನ್ನ ಗುರುಗಳಾದ ಅಜ್ಜಯ್ಯ ಅವರು ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತನ್ನು ಹೇಳಿದ್ದಾರೆ. ಈ ಮಾತಿನಂತೆಯೇ ನಾವೆಲ್ಲರೂ ನಡೆಯಬೇಕು” ಎಂದರು.


