ಮುಸ್ಲಿಂ ವಿದ್ಯಾರ್ಥಿಯಿಂದ ಗಣೇಶನ ಪೂಜೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ವರ ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನನ್ನು ಸಕಲರೂ ಪೂಜಿಸುತ್ತಾರೆ. ಆದರೆ ಮುಸ್ಲಿಂ ಸಮಾಜದವರು ಪೂಜೆ ಮಾಡುವದು ಅಪರೂಪ. ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಮುಕ್ತುಂಸಾಬ ರಾಜೇಸಾಬ ಕಲೆಗಾರ ಎನ್ನುವ ವಿದ್ಯಾರ್ಥಿ ಕಳೆದ 3 ವರ್ಷಗಳಿಂದ ಗಣೇಶನನ್ನು ತಾನೇ ತಯಾರಿಸಿ ಪೂಜೆ ಸಲ್ಲಿಸುತ್ತಿರುವದು ವಿಶೇಷವಾಗಿದೆ.

Advertisement

ಉಮಾವಿದ್ಯಾಲಯ ಹೈಸ್ಕೂಲ್ ಹಿಂದುಗಡೆ ಇರುವ ಜಾಗೆಯಲ್ಲಿ ಗುಡಿಸಲಿನಲ್ಲಿ ವಾಸಿಸುವ ರಾಜೇಸಾಬ ಕಲೆಗಾರರ ಪುತ್ರ ಮುಕ್ತುಂಸಾಬ. ಎಲ್ಲೆಡೆ ಗಣೇಶನ ಪೂಜೆ ಮಾಡುವುದು, ಅದನ್ನು ತಯಾರಿಸುವದನ್ನು ನೋಡುತ್ತಿದ್ದ ಈತ ಕಳೆದ 2-3 ವರ್ಷಗಳ ಹಿಂದೆ ತಾನೇ ಮಣ್ಣು ತಂದು, ತನಗೆ ತಿಳಿದ ರೀತಿಯಲ್ಲಿ ಗಣೇಶನ ಮೂರ್ತಿ ಸಿದ್ಧಪಡಿಸಿ ಪೂಜಿಸಿದ್ದಾನೆ.

ಈ ವರ್ಷವೂ ಈತ ಮೂರ್ತಿಯನ್ನು ಸಿದ್ಧಪಡಿಸಿ ಗುಡಿಸಿಲಿನ ಪಕ್ಕದ ಜಾಗೆಯಲ್ಲಿಯೇ ಅಳಿದುಳಿದ ಬಟ್ಟೆ ಕಟ್ಟಿ, ಮುರಿದ ಹಲಗೆಯನ್ನು ಹಾಕಿ ಅದರ ಮೇಲೆ ಗಣೇಶನನ್ನು ಕೂರಿಸಿ ಪೂಜೆ ಸಲ್ಲಿಸಿದ್ದಾನೆ. ನಾಲ್ಕನೇ ದಿನವಾದ ಶನಿವಾರ ಸುತ್ತಮುತ್ತಲಿನ ತನ್ನ ಗೆಳೆಯರನ್ನು ಕರೆದು ಪ್ರಸಾದ ರೂಪದಲ್ಲಿ ಸಿಹಿ ಮತ್ತು ಚಿತ್ರಾನ್ನ ತಯಾರಿಸಿ ಊಟ ಹಾಕಿರುವದು ಆತನ ವಿಶೇಷ ಭಕ್ತಿಗೆ ಸಾಕ್ಷಿಯಾಗಿದೆ. 5ನೇ ದಿನವಾದ ಭಾನುವಾರ ಮುಂಜಾನೆಯೇ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಿ ಬಂದಿದ್ದಾನೆ. ಈ ಕುರಿತು ಆತನನ್ನು ಪ್ರಶ್ನಿಸಿದಾಗ ಎಲ್ಲರೂ ಮಾಡುವುದು ನೋಡಿ ನನಗೆ ಗಣೇಶನ ಕೂಡಿಸುವ ಆಸೆಯಾಗಿತ್ತು, ಅದರಂತೆ ಎರಡು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಇದರಿಂದ ನನಗೆ ಒಳ್ಳೆಯದಾಗುವುದೆಂಬ ಭರವಸೆಯಿದೆ ಎನ್ನುತ್ತಾನೆ.

ಈತನ ಭಕ್ತಿಯ ಕುರಿತು ಯಲ್ಲಪ್ಪ ಬೆಳವಗಿ ಎಂಬುವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here