ವಿಜಯಸಾಕ್ಷಿ ಸುದ್ದಿ, ಗದಗ: ಮುಹಮ್ಮದ ಪೈಗಂಬರರ ಜೀವನ ಸಂದೇಶಗಳನ್ನು ತಿಳಿಸುವ ಸೀರತ್ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಕಮಿಟಿಯ ಕೆ.ಐ. ಶೇಖ್ ತಿಳಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯದ ಹರಿಕಾರ ಮುಹಮ್ಮದ ಪೈಗಂಬರ್ ಅವರ ಮಾನವೀಯ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೆಪ್ಟೆಂಬರ್ 3ರಿಂದ 14ರ ವರೆಗೆ ರಾಜ್ಯಾದ್ಯಂತ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ಮಠಾಧೀಶರೊಂದಿಗೆ ಚರ್ಚೆ, ಉಪನ್ಯಾಸಕರೊಂದಿಗೆ ವಿಚಾರ ವಿನಿಮಯ, ವೈದ್ಯರು ಮತ್ತು ವಕೀಲರ ಭೇಟಿ, ಪೈಗಂಬರರ ಕುರಿತಾದ ಎರಡು ಪುಸ್ತಕಗಳ ಬಿಡುಗಡೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆ, ರಕ್ತದಾನ ಶಿಬಿರ ಹಾಗೂ ಇನ್ನೂ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅಭಿಯಾನವನ್ನು ವಿಶಿಷ್ಟವಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.
ಸೆ. 5ರಂದು ಹಳೆ ಬಸ್ ನಿಲ್ದಾಣದ ಸಮೀಪದ ಉರ್ದು ಶಾಲೆಯಲ್ಲಿ ಪೈಗಂಬರರ ಜಯಂತಿ ಆಚರಿಸಲಾಗುವುದು. ಅಂದು ಮಕ್ಕಳಿಗೆ ಪುಸ್ತಕ ವಿತರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಪ್ಯಾರಾಲಿ ನೂರಾನಿ, ಉಸ್ಮಾನ ಅಲಿ, ಡಾ. ಮಹಮ್ಮದ ನಿಜಾಮುದ್ದೀನ್, ಮುಕ್ತಿಯಾರ ಮೌಲ್ವಿ, ಸಿರಾಜ್ ಅಹ್ಮದ್ ಖಾಜಿ, ಎಂ.ಎಂ. ಹುನಗುಂದ, ಮುನ್ನಾ ಕಲ್ಮನಿ, ಯುಸೂಫ್ ಮುಲ್ಲಾ ಮುಂತಾದವರಿದ್ದರು.



