ಮಂಗಳೂರು: ಧರ್ಮಸ್ಥಳದ ಬಗ್ಗೆ ಸೋಶಿಯಲ್ ಮೀಡಿಯಾ ಮತ್ತು ಯೂಟ್ಯೂಬ್ನಲ್ಲಿ ಅಪಪ್ರಚಾರ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ, ಕೆಲವು ಯೂಟ್ಯೂಬರ್ಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ಸಲ್ಲಿಸಲಾಗಿತ್ತು. ಅದಲ್ಲದೆ ವಿದೇಶಿ ಫಂಡಿಂಗ್ನ ಆರೋಪವೂ ಕೇಳಿ ಬಂದಿತ್ತು. ಇದೀಗ ಈ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ(ನಿರ್ದೇಶನಾಲಯ) ಪ್ರವೇಶ ಮಾಡಿದೆ.
ಎರಡು ಎನ್‌ಜಿಓಗಳು (NGO) ಕಾನೂನನ್ನು ಉಲ್ಲಂಘಿಸಿ ವಿದೇಶಿ ಹಣವನ್ನು ಪಡೆದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದನ್ನು ಧರ್ಮಸ್ಥಳದ ವಿರುದ್ಧದ ಪಿತೂರಿಗೆ ಬಳಸಿರುವ ಸಾಧ್ಯತೆ ಇದೆ. ಇಡಿ ಅವರ ಹಣಕಾಸಿನ ವ್ಯವಹಾರದ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಇಡಿ ಅಧಿಕಾರಿಗಳು ಪೊಲೀಸರಿಂದ ದಾಖಲೆಗಳನ್ನು ಪಡೆದಿದ್ದಾರೆ. ಅಲ್ಲದೇ ವಿದೇಶಿ ಫಂಡ್ ಉಲ್ಲಂಘನೆ ಆರೋಪದ ಮೇಲೆ ಎರಡು ಎನ್‌ಜಿಓಗಳ ಖಾತೆ ವಿವರಗಳು ಮತ್ತು ವಹಿವಾಟಿನ ದಾಖಲೆಗಳ ಬಗ್ಗೆ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಎರಡು ದೂರುಗಳ ಆಧಾರದ ಮೇಲೆ ಇಡಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಯ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಇತರ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಅವರ ಪ್ಯಾನ್ ವಿವರಗಳು, ಖಾತೆ ಮಾಹಿತಿ ಮತ್ತು NGO ಗಳಿಗೆ ಸಂಬಂಧಿಸಿದ ಐದು ವರ್ಷಗಳ ವಹಿವಾಟು ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದೆ.



