ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸದಾ ಸಮಾಜಮುಖಿ ಕಾರ್ಯಗಳೊಂದಿಗೆ ಕಳೆದ 25 ವರ್ಷಗಳಿಂದ ವಿಘ್ನ ನಿವಾರಕ ಗಣೀಶನನ್ನು ಶೃದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಿ ಪೂಜಿಸುತ್ತ ಬಂದಿರುವ ಕೋಟೆ ವೀರಭದ್ರೇಶ್ವರ ಯುವಕ ಮಂಡಳದ ಕಾರ್ಯ ಶ್ಲಾಘನೀಯ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ಇಲ್ಲಿಯ ಕೋಟೆ ವೀರಭದ್ರೇಶ್ವರ ಯುವಕ ಮಂಡಳವು ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿಯಾಗಿರುವ ಸಂಘದ ಸದಸ್ಯರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ಸಂಘವು ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದೆ. ವಿಶೇಷವಾಗಿ ಕಬಡ್ಡಿ ಆಟದಲ್ಲಿ ಮುಂಚೂಣಿಯಲ್ಲಿದ್ದು, ಸಂಘದ ಸದಸ್ಯರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಡಿ ಯಶಸ್ವಿಯಾಗಿದ್ದಾರೆ. ಕೇವಲ ಆಟದಲ್ಲಿಯೇ ತೊಡಗಿಕೊಳ್ಳದೇ ಸಮಾಜಮುಖಿಯಾಗಿ ಉಚಿತ ಸಾಮೂಹಿಕ ವಿವಾಹ ಮಾಡುವದರೊಂದಿಗೆ ಜಾತ್ರೆ, ಉತ್ಸವಗಳಲ್ಲಿ ಭಾಗಿಯಾಗಿ ಈ ಗ್ರಾಮದಲ್ಲಿ ಮಾದರಿ ಯುವಕ ಮಂಡಳವಾಗಿ ಹೊರಹೊಮ್ಮಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಕ ಎಸ್.ಸಿ. ಭಾವಿ ಪ್ರಾಸ್ತವಿಕವಾಗಿ ಮಾತನಾಡುತ್ತಾ, ಸಂಘವು ಬೆಳೆದುಬಂದ ದಾರಿಯನ್ನು ವಿವರಿಸಿ, ಹಲವಾರು ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿ ಗದಗ ಜಿಲ್ಲೆಯಲ್ಲಿ ಹೆಸರು ಗಳಿಸಿದೆ. ಸಂಘವು ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಕೂಟವನ್ನು ಏರ್ಪಡಿಸುವ ಕನಸನ್ನು ಹೊಂದಿದ್ದು, ಕ್ರೀಡಾಭಿಮಾನಿಗಳ, ಗಣ್ಯರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಬೇವಿನಮಟ್ಟಿ ಮಾತನಾಡಿದರು. ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗೇಶ್ವರ ಶ್ರೀಗಳು, ಶಿವಮೂರ್ತೆಯ್ಯ ಮುಳಗುಂದಮಠ, ನಿವೃತ್ತ ಶಿಕ್ಷಕ ವಿ.ಐ. ಬಡಿಗೇರ, ಸಂಘದ ಅಧ್ಯಕ್ಷ ಹಾಲ್ಲಪ್ಪ ಹಳ್ಳಿ ವೇದಿಕೆಯಲ್ಲಿದ್ದರು. ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಸ್ವಾಗತಿಸಿದರು. ಪ್ರಕಾಶ ಅರಹುಣಶಿ ನಿರೂಪಿಸಿದರು. ಬಸವರಾಜ ಬೂಮಣ್ಣವರ ವಂದಿಸಿದರು.
ನಿವೃತ್ತ ಎಎಸ್‌ಐ ಯಲ್ಲಪ್ಪ ಕದಂ ಮಾತನಾಡಿ, ಈ ಯುವಕ ಮಂಡಳದ ಸದಸ್ಯನಾಗಿ ಕಬಡ್ಡಿ ಕ್ರೀಡಾಪಟುವಾಗಿ ಹೊರಹೊಮ್ಮಿದ್ದೆ. ಇಲ್ಲಿಯ ಕಾರ್ಯ ಚಟುವಟಿಕೆಯಿಂದಲೇ ನಾನು ಪೊಲೀಸ್ ಇಲಾಖೆಯಲ್ಲಿ ಸೇರುವಂತಾಯಿತು. ಆದ್ದರಿಂದ ಇಂದಿನ ಯುವ ಪೀಳಿಗೆ ದುಶ್ಚಟದಿಂದ ದೂರವಿದ್ದು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಬ್ಬ ಯುವಕರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.