ಬೆಂಗಳೂರು: ಸಚಿವ ಜಮೀರ್ ಅಹ್ಮದ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೆಜಿಎಫ್ ಬಾಬುಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಸಚಿವ ಜಮೀರ್ ಅಹ್ಮದ್ಗೆ 2013 ರಲ್ಲಿ ಕೆಜಿಎಫ್ ಬಾಬು 3.70 ಕೋಟಿ ಸಾಲ ನೀಡಿದ್ದರು ಎನ್ನಲಾಗ್ತಿದೆ. ಜಮೀರ್ ಖಾನ್ ಮನೆ ಖರೀದಿ ವೇಳೆ ಸಾಲ ನೀಡಲಾಗಿದೆ ಎನ್ನಲಾಗ್ತಿದೆ. ಜೊತೆಗೆ ಹಣವನ್ನ ಯಾವ ಯಾವ ಕಾರಣಕ್ಕಾಗಿ ನೀಡಿದ್ದೀರಿ, ಇಬ್ಬರ ನಡುವಿನ ವ್ಯವಹಾರಗಳೇನು ಎಂದು ವಿಚಾರಣೆ ನಡೆಯಲಿದೆ.
ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ನೋಟಿಸ್ ತಲುಪಿದ 7 ದಿನಗಳೊಳಗೆ ಹಾಜರಾಗಲು ಸೂಚಿಸಲಾಗಿದೆ. ಇದೇ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಕೂಡ ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದ್ದರು.



