ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಭಾರತೀಯ ಕಿಸಾನ ಸಂಘಟನೆ ರೈತರಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಭಾರತೀಯ ಕಿಸಾನ ಸಂಘದ ಉಪಪ್ರಾಂತ ಅಧ್ಯಕ್ಷ ವಿವೇಕ ಮೋರೆ ಹೇಳಿದರು.
ನರೇಗಲ್ಲ ಕೆಎಸ್‌ಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ, ಗಜೇಂದ್ರಗಡ ತಾಲೂಕಾ ಪ್ರಶಿಕ್ಷಣ ವರ್ಗದ ಒಂದು ದಿನದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
ರೈತ ಈ ರಾಷ್ಟ್ರದ ಅನ್ನದಾತ. ಅನ್ನ ನೀಡುವ ರೈತನನ್ನೇ ಸರಕಾರ ಮತ್ತು ಚುನಾಯಿತಗೊಂಡ ಜನಪ್ರತಿನಿಧಿಗಳು, ಅಧಿಕಾರಿಗಳು ಕಡೆಗಣಿಸುತ್ತಿರುವುದು ಖಂಡನೀಯ. ಅಂತಹವರ ವಿರುದ್ಧ ಧ್ವನಿಯಾಗಲು ರೈತ ಸಂಘಟನೆ ಅತಿ ಅವಶ್ಯಕವಾಗಿದೆ. ರೈತ ಸಂಘಟನೆ ಗ್ರಾಮ ಸಮಿತಿಯು 9 ಪದಾಧಿಕಾರಿಗಳನ್ನು ಒಳಗೊಂಡಿರುತ್ತದೆ. ಪ್ರತಿ ತಿಂಗಳಿಗೊಮ್ಮೆ ತಮ್ಮ ಸಮಸ್ಯೆಗಳ ವಿಚಾರ ವಿನಿಮಯಕ್ಕೆ ಒಗ್ಗೂಡಬೇಕಾಗುತ್ತದೆ. ಗ್ರಾಮ, ಜಿಲ್ಲೆ, ಪ್ರಾಂತ ಹೀಗೆ ಹಲವಾರು ವಿಭಾಗಗಳಲ್ಲಿ ನಿರಂತರ ಕಾರ್ಯ ನಿರ್ವಹಿಸಲಿವೆ ಎಂದರು.
ಪ್ರಾಂತ ಕಾರ್ಯದರ್ಶಿ ಶಿವಕುಮಾರ ಗಾಣಗಿ ಮಾತನಾಡಿ, ರೈತರು ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿ ಇಂದಿನ ಆಧುನಿಕತೆಗೆ ಅನುಗುಣವಾಗಿ ಪ್ರಗತಿಯತ್ತ ಸಾಗಬೇಕು. ರೈತರು ವಿವಿಧ, ವಿಭಿನ್ನ ಬೆಳೆ ಬೆಳೆಯಲು ಮುಂದಾಗಬೇಕು. ಅತಿವೃಷ್ಟಿ, ಅನಾವೃಷ್ಟಿಗೆ ಬೆಳೆದ ಪೈರು ನಷ್ಟವಾದ ಸಂದರ್ಭದಲ್ಲಿ ರೈತರು ಒಗ್ಗೂಡಿ ರಚನಾತ್ಮಕ ಹೋರಾಟದ ಮೂಲಕ ಸಂಘಟನೆಗೆ ಮುಂದಾಗಬೇಕೆಂದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಗದಗ ಜಿಲ್ಲಾಧ್ಯಕ್ಷ ಸಂಗನಗೌಡ ಪಾಟೀಲ, ಪ್ರಾಂತ ಪ್ರಧಾನ ಕಾರ್ಯದರ್ಶಿ ಜಗದೀಶ ಸಂಕನಗೌಡ್ರ, ತಾಲೂಕಾಧ್ಯಕ್ಷ ಮಲ್ಲನಗೌಡ ಪಾಟೀಲ, ಕಾರ್ಯದರ್ಶಿ ರವಿ ಮ್ಯಾಗೇರಿ, ಉಮೇಶ ಪಾಟೀಲ, ರಾಜಶೇಖರಗೌಡ ಪಾಟೀಲ, ಶಿವುಕುಮಾರ ಮಾವಿನಕಾಯಿ ಮುಂತಾದವರಿದ್ದರು.



