ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ನವಚೇತನ ಯುವಕ ಮಂಡಳದ 21ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ 9ನೇ ವರ್ಷದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.
ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ನಾವು ಮಾಡುವ ರಕ್ತದಾನದಿಂದ ಮತ್ತೊಂದು ಅಮೂಲ್ಯವಾದ ಜೀವ ಉಳಿಯುತ್ತದೆ. ರಕ್ತದ ಅಗತ್ಯ ಇರುವಾಗ ನಾವು ದಾನವಾಗಿ ಕೊಟ್ಟ ರಕ್ತ ಅವರನ್ನು ಬದುಕಿಸುತ್ತದೆ. ಈ ನಿಟ್ಟಿನಲ್ಲಿ ಸೂರಣಗಿ ಗ್ರಾಮದ ನವಚೇತನ ಯುವಕ ಸಂಘದ ಸದಸ್ಯರು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರ ನೂರಾರು ಜನರನ್ನು ಬದುಕಿಸಿದ್ದು ಒಂದು ಉತ್ತಮ ಕಾರ್ಯ ಎಂದರು.
ವೈದ್ಯ ಬಿ.ಜಿ. ಅಂಗಡಿ ಶಿಬಿರ ಉದ್ಘಾಟಿಸಿದರು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ ಮಾತನಾಡಿದರು. ಈ ಸಂದರ್ಭದಲ್ಲಿ ಈರಪ್ಪ ಶೀರನಹಳ್ಳಿ, ಶಂಕರಯ್ಯ ಹಿರೇಮಠ, ಚನ್ನಬಸಪ್ಪ ಶೀರನಹಳ್ಳಿ, ಸಿದ್ದಯ್ಯ ಮಾದಾಪುರಮಠ, ಹುಸೇನಸಾಬ್ ಕೋಲ್ಕಾರ, ವೀರೇಶ ಕಳ್ಳಿಹಾಳ, ಶೇಖಣ್ಣ ಪೂಜಾರ, ವೈದ್ಯರಾದ ಚಂದ್ರಶೇಖರ ಹೊಸಳ್ಳಿಮಠ, ಅಕ್ಷತಾ ಎನ್, ವಿಷ್ಣುಕುಮಾರ್, ಕಾವ್ಯ ಸಂಗಣ್ಣವರ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ರಕ್ತನಿಧಿ ಕೇಂದ್ರದ ಸಿಬ್ಬಂದಿ, ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಗ್ರಾಮದ ಸರ್ವ ಯುವಕ ಮಂಡಲಗಳ ಸದಸ್ಯರುಗಳು, ನವಚೇತನ ಯುವಕ ಮಂಡಳದ ಸದಸ್ಯರು ಇದ್ದರು.
ಬಸವರಾಜ ದುರ್ಗದ ಸ್ವಾಗತಿಸಿದರು. ನಾಗರಾಜ ಪೂಜಾರ ನಿರೂಪಿಸಿದರು. ಈ ವರ್ಷದ ರಕ್ತದಾನ ಶಿಬಿರದಲ್ಲಿ ಮಹಿಳೆಯರಾದ ಹೇಮಾ ಸಂಬಣ್ಣ ಮೂಲಿಮನಿ, ಕಸ್ತೂರವ್ವ ಮೂಲಿಮನಿ, ಜ್ಯೋತಿ ಸಾಸಲವಾಡ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.



