ಕನ್ನಡ ಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ನಿನ್ನೆಯಷ್ಟೇ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಾಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇಂದು ವಿಷ್ಣುವರ್ಧನ್ ಅವರ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕನಿಷ್ಠ 10 ಗುಂಟೆ ಜಾಗ ನೀಡಬೇಕು ಹಾಗೂ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಭಾರತಿ ಹಾಗೂ ಅನಿದ್ಧ್ ಅವರಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ನಾಳೆ ನಡೆಯುವ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.
ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾರತಿ ವಿಷ್ಣುವರ್ಧನ್, ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಸಿಎಂಗೆ ಮನವಿ ಮಾಡಿದ್ದೇವೆ. ವಿಷ್ಣು ವರ್ಧನ್ ಅವರ ಅಭಿಮಾನಿಗಳಿಗಾಗಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ರವರ ಸ್ಮಾರಕಕ್ಕೆ ಜಾಗ ಕೇಳಿದ್ದೇವೆ. ಅದಕ್ಕೆ ಸಿಎಂ ಸರಿ ಎಂದಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳ್ತೇನೆ. ಕರ್ನಾಟಕ ರತ್ನ ಕೊಡಿ ಎಂದು ನಾನು ಕೇಳಲ್ಲ. ಆದರೆ ಅಭಿಮಾನಿ ಗಳು ಕೇಳುತ್ತಿದ್ದಾರೆ. ಅವರಿಗಾಗಿ ಕರ್ನಾಟಕ ರತ್ನ ಕೊಡಬೇಕು. ಅಭಿಮಾನಿಗಳು ಬಂದು ನಮಸ್ಕಾರ ಮಾಡಲು ಜಾಗಕ್ಕೆ ಅನುಮತಿ ಕೊಡಬೇಕು . 18ನೇ ತಾರೀಖಿನಂದು ವಿಷ್ಣುರವರ ಹುಟ್ಟು ಹಬ್ಬ ಇದೆ. ಅಷ್ಟರೊಳಗೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಸರ್ಕಾರ ಅನುಮತಿ ಕೊಡಬಹುದೆಂಬ ನಿರೀಕ್ಷೆ ಇದೆ ಎಂದರು.
ಇನ್ನೂ ವಿಷ್ಣುವರ್ಧನ್ ಅಳಿಯ ನಟ ಅನಿರುದ್ದ್ ಮಾತನಾಡಿ, ಅಭಿಮಾನ್ ಸ್ಟುಡಿಯೋದಲ್ಲಿರುವ ಹತ್ತು ಗುಂಟೆ ಜಾಗಕ್ಕಾಗಿ ಮನವಿ ಮಾಡಿದ್ದೇವೆ. ಆ ಜಾಗದಲ್ಲಿ ಮಂಟಪ ನಿರ್ಮಿಸಲು ಅನುಮತಿ ಕೊಡಿ ಎಂದು ಕೇಳಿದ್ದೇವೆ. ಹಿಂದೆ ಅಲ್ಲಿ ನಾವೇ ಮಂಟಪವನ್ನು ಕಟ್ಟಿದ್ದೇವು. ಈಗಲೂ ಜಾಗ ಕೊಟ್ಟರೆ ನಾವೇ ಮಂಟಪ ಕಟ್ಟಿಕೊಳ್ತೇವೆ. ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಜೊತೆಗೂ ಸಿಎಂ ಮಾತಾಡಿದ್ದಾರೆ . ಅವರು ಕೂಡ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ. ಸೆಪ್ಟೆಂಬರ್ 18ರೊಳಗೆ ಜಾಗಕ್ಕೆ ಅನುಮತಿ ಸಿಗಬಹುದು. ನಾಳೆಯ ಕ್ಯಾಬಿನೆಟ್ ನಲ್ಲಿ ಕರ್ನಾಟಕ ರತ್ನದ ಬಗ್ಗೆ ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ನಾಳೆ ಚರ್ಚೆ ಆಗಿ ಅಪ್ಪ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.