ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಆರಂಭದಿಂದಲೂ ದರ್ಶನ್ ಪರ ನಿಂತವರು ನಟ ಧನ್ವೀರ್. ಜೈಲಿನಿಂದ ದರ್ಶನ್ ಜಾಮೀನು ಪಡೆದು ಹೊರ ಬರುವಲ್ಲಿ ಧನ್ವೀರ್ ಕೂಡ ಸಾಕಷ್ಟು ಶ್ರಮಿಸಿದ್ದರು. ಇದೀಗ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ದರ್ಶನ್ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ನಟ ಧನ್ವೀರ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟ ಧನ್ವೀರ್, ನನ್ನ ಆತ್ಮೀಯ ಅಭಿಮಾನಿಗಳೇ, ಸೆಪ್ಟೆಂಬರ್ ೮ರಂದು ನನ್ನ ಹುಟ್ಟುಹಬ್ಬ ಇರುವುದರಿಂದ ನಿಮ್ಮ ಸಂಭ್ರಮಾಚರಣೆಯಲ್ಲಿ ನಾನು ಭಾಗಿಯಾಗಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಕ್ಷಮೆ ಇರಲಿ. ನನ್ನ ಪ್ರೀತಿಯ ಅಭಿಮಾನಿಗಳೆ ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಹಾರೈಸಿ, ಆಶೀರ್ವಾದಿಸಬೇಕಾಗಿ ಪ್ರೀತಿಯಿಂದ ವಿನಂತಿಸಿಕೊಳ್ಳುತ್ತೇನೆ. ಮುಂದಿನ ವರ್ಷ ಖಂಡಿತವಾಗಿಯೂ ನಿಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.
ದರ್ಶನ್ ಅವರ ಕಷ್ಟಕಾಲದಲ್ಲೂ ಅವರ ಜೊತೆ ನಿಂತಿದ್ದು ನಟ ಧನ್ವೀರ್ ಗೌಡ. ಕಳೆದ ವರ್ಷ ದರ್ಶನ್ ಜೈಲು ಸೇರಿದ ಸಂದರ್ಭದಿಂದಲೂ ಹಿಡಿದು ಬಳ್ಳಾರಿ ಜೈಲಿನಿಂದ ಬರುವಾಗಲೂ ದರ್ಶನ್ ಜೊತೆ ಧನ್ವೀರ್ ಇದ್ದರು. ನಂತರವೂ ದರ್ಶನ್ ಹೋದಲ್ಲಿ ಬಂದಲ್ಲಿ ಕೂಡ ಧನ್ವೀರ್ ಜೊತೆಯಲ್ಲೇ ಸಾಥ್ ನೀಡಿದ್ದರು.
ದರ್ಶನ್ ಅವರು ಮೊದಲಿನಿಂದಲೂ ಒಂದು ಗ್ಯಾಂಗ್ ಹೊಂದಿದ್ದರು. ಇದರಲ್ಲಿ ಸಿನಿಮಾ ನಟರೂ ಇದ್ದರು. ಆದರೆ ಕಾರಣಾಂತರಗಳಿಂದ ಒಬ್ಬೊಬ್ಬರಾಗಿಯೇ ದೂರವಾಗಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರ ಗೊತ್ತಾದ ಮೇಲಂತೂ ಅವರ ಗ್ಯಾಂಗ್ ಸೈಲೆಂಟ್ ಆಗಿತ್ತು. ಆದರೆ ಧನ್ವೀರ್ ಅವರು ದರ್ಶನ್ ಅವರ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡುತ್ತಾ ಅವರೊಂದಿಗೆ ನಿಂತರು. ಇದೀಗ ದರ್ಶನ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಧನ್ವೀರ್ ಬರ್ತಡೇಗೆ ಬ್ರೇಕ್ ಹಾಕಿದ್ದಾರೆ.



