ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಈದ್‌ಮಿಲಾದ ಕಮಿಟಿಯ ವತಿಯಿಂದ ಪ್ರವಾದಿ ಮುಹಮ್ಮದ ಪೈಗಂಬರರ ಜಯಂತಿಯ ನಿಮಿತ್ತ 2025ನೇ ಸಾಲಿನ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ಉರ್ದು ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಬಡ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ನೆರವೇರಿಸಿದರು. ಸಾನ್ನಿಧ್ಯವನ್ನು ಪರಮ ಪೂಜ್ಯ ಕಲ್ಲಯ್ಯಜ್ಜನವರು ವಹಿಸಿದ್ದರು. ಉಪನ್ಯಾಸಕರಾಗಿ ಮೌಲಾನ ಮುಫ್ತಿ ಮಹಮ್ಮದ ನಿಜಾಮುದ್ದೀನ ಕಾಸ್ತಿ ಆಗಮಿಸಿದ್ದರು. ವಿಶೇಷ ಆಮಂತ್ರಿತರಾದ ಮೌಲಾನ ಇನಾಯಿತುಲ್ಲಾಸಾಬ ಪೀರೆಜಾದೆ ಹಾಗೂ ರಜಾಕ ಡಕೇದ ಇವರ ಉಪಸ್ಥಿತಿಯಲ್ಲಿ ಮೌಲಾನ ಅಬ್ದುಲ್ ರಹೀಮ ಚಂದುನವರು ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮವನ್ನುದ್ದೇಶಿ ಉಪನ್ಯಾಸ ನೀಡಿದ ಮೌಲಾನ ನಿಜಾಮುದ್ದೀನ, ಪ್ರವಾದಿ ಮುಹಮ್ಮದ ಪೈಗಂಬರರು ಜಗತ್ತಿನ ಮಾನವ ಕುಲಕ್ಕಾಗಿ ಸಂದೇಶ ನೀಡಿದರು. ಇಂತಹ ಕಾರ್ಯಕ್ರಮವನ್ನು ಜಾತ್ಯಾತೀತವಾಗಿ ಪ್ರತಿ ವರ್ಷ ಎಲ್ಲ ಸಮುದಾಯದ ಜನರನ್ನು ಒಳಗೊಂಡು ಮಾಡಬೇಕು. ಗದುಗಿನ ಜನತೆ ರಾಜ್ಯಕ್ಕೆ ಮಾದರಿಯಾಗುವಂತೆ ಆಡಂಬರವಿಲ್ಲದ ಅರ್ಥಪೂರ್ಣ ಜಯಂತಿ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಜನಾಬ ಉಸ್ಮಾನ ಮಾಳೆಕೊಪ್ಪ, ಜನಾಬ ಆರೀಫ ಹುನಗುಂದ, ಜನಾಬ ಶೌಕತ್ ಅಣ್ಣಿಗೇರಿ, ಜನಾಬ ಅಶಪಾಕಅಲಿ ಹೊಸಳ್ಳಿ, ಜನಾಬ ಶೌಕತಅಲಿ ಕಾತರಕಿ, ಜನಾಮ ಇಮಾಮಸಾಬ ನಮಾಜಿ, ಜನಾಬ ತೌಸಿಫ ಢಾಲಾಯತ, ಜನಾಬ ಜಾಕೀರ ಬಾಗಲಕೋಟ, ಜನಾಬ ಅಕ್ಬರ ಅತ್ತಾರ, ಜನಾಬ ಅಬ್ದುಲ್ ಉಮಚಗಿ, ಜನಾಬ ಹನೀಫ ಮುಳಗುಂದ, ಜನಾಬ ಮೆಹಬೂಬಸಾಬ ರೋಣ, ಜನಾಬ ಅನ್ವರ ಈಟಿ, ಜನಾಬ ಸಲೀಮ ಬಳ್ಳಾರಿ ಪಾಲ್ಗೊಂಡಿದ್ದರು. ಜನಾಬ ಮಹಮ್ಮದಶಫಿ ಯರಗುಡಿ ನಿರೂಪಿಸಿದರು. ಭಾಷಾಸಾಬ ಮಲ್ಲಸಮುದ್ರ ವಂದಿಸಿದರು.