ವಿಜಯಸಾಕ್ಷಿ ಸುದ್ದಿ, ಗದಗ: ಈದ್ ಮಿಲಾದ್ ಅಂಗವಾಗಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದಿಂದ ಸಿಹಿ ವಿತರಿಸಿ, ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಬೆಟಗೇರಿ ಬಡಾವಣೆಯ ಪಿಎಸ್‌ಐ ಮಾರುತಿ ಜೋಗದಂಡ್ಕರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಧರ್ಮ ಗುರುಗಳಾದ ಮೌಲಾನಾ ಬಗಲಿ ವಹಿಸಿದ್ದರು. ನಗರಸಭಾ ಮಾಜಿ ಸದಸ್ಯ ಫಕೀರಪ್ಪ ಹೆಬಸೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಪ್ರವಾದಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದರು.
ಸನ್ಮಾನ ಸ್ವೀಕರಿಸಿದ ಮಾರುತಿ ಜೋಗದಂಡ್ಕರ ಮಾತನಾಡಿ, ಮುಸ್ಲಿಂ ಬಾಂಧವರು ಶಾಂತಿ ಪ್ರಿಯರು. ಏಕೆಂದರೆ ಇಸ್ಲಾಂ ಶಾಂತಿಯ ಬೋಧನೆಯನ್ನು ಮಾಡುತ್ತದೆ. ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ಜಾಫರ್ ಡಾಲಾಯತ ಮಾತನಾಡಿ, ಈದ್ ಮಿಲಾದ್ ಎಂದರೆ ಕೇವಲ ಮನೋರಂಜನೆ ಆಗಬಾರದು. ನಾವೆಲ್ಲ ಪ್ರವಾದಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅವರ ತತ್ವ-ಆದರ್ಶಗಳಂತೆ ನಮ್ಮ ಜೀವನವನ್ನು ಸಾಗಿಸಬೇಕು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿ, ಪ್ರವಾದಿಗಳು ಬಹಳ ಸರಳ ಹಾಗೂ ಗೌರವದಿಂದ ತಮ್ಮ ಜೀವನವನ್ನು ಸಾಗಿಸಿದರು. ಅವರಂತೆ ನಾವು ನಮ್ಮ ಜೀವನ ಸಾಗಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಉಮರ ಫಾರೂಕ್ ಹುಬ್ಬಳ್ಳಿ ಮಾತನಾಡಿ, ಪ್ರವಾದಿಗಳು ಯಾವತ್ತೂ ಬೇರೆ ಧರ್ಮವನ್ನು ನಿಂದಿಸಲಿಲ್ಲ. ಪ್ರತಿಯೊಂದು ಧರ್ಮಕ್ಕೂ ಗೌರವ ನೀಡಿದರು. ಅವರಂತೆ ನಾವು ಬೇರೆ ಧರ್ಮಗಳಿಗೆ ಗೌರವ ನೀಡುವಂತರಾಗಬೇಕು ಹೇಳಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಾಸಭಾದ ಸದಸ್ಯರಾದ ರಹೀಂ ಸಾಬ್ ದೊಡ್ಡಮನಿ, ಯಾಸಿನ್ ಮುಲ್ಲಾ, ಅಫ್ಜಲ್ ಮನಿಯಾರ, ಗಣ್ಯರಾದ ಅನ್ವರ್ ಶಿರಹಟ್ಟಿ, ಇರ್ಫಾನ್ ಡಂಬಳ, ಯೂಸುಫ್ ರಂಗರೆಜ್, ಮುಕ್ತುಂ ಹುಸೇನ್ ಜಮಾದಾರ, ಇಸಾಕ್ ಇರಕಲ್, ಇಬ್ರಾಹಿಂ ಅತ್ತಾರ, ಸಲೀಂ ಶಿರಹಟ್ಟಿ, ಅನಿಶ್ ಲಾಲಕೋಟಿ, ರಾಜೇಸಾಬ ರೋಣದ ಉಪಸ್ಥಿತರಿದ್ದರು.