ಮಂಗಳೂರು:- ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದ ಬುರುಡೆ ಚಿನ್ನಯ್ಯಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನನ ಎಸ್‌ಐಟಿ ಕಸ್ಟಡಿ ಅಂತ್ಯವಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ. ಭದ್ರತೆ ದೃಷ್ಟಿಯಿಂದ ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಸ್ಥಳಾಂತರಿಸಿದ್ದಾರೆ.
ಅತ್ತ ನ್ಯಾಯಾಂಗ ಬಂಧನಕ್ಕೊಳಗಾಗುತ್ತಿದ್ದಂತೆ ಇತ್ತ ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿದ್ದ ಚಿನ್ನಯ್ಯ ಪರ ವಕೀಲರಿಂದ ಜಾಮೀನು ಕೋರಿ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ಹೆಚ್ಚು ಕಡಿಮೆ ಎರಡು ತಿಂಗಳು ಬುರುಡೆ ಬಿಟ್ಟಿದ್ದ ಚಿನ್ನಯ್ಯ, ಧರ್ಮಸ್ಥಳ ಸುತ್ತ ಮುತ್ತ 17 ಗುಂಡಿ ಅಗೆಸಿದ್ದ. ಕೊನೆಗೆ ನಾನು ಹೇಳಿದ್ದೆಲ್ಲ ಸುಳ್ಳು ಅಂತಾ ತಪ್ಪೊಪ್ಪಿಕೊಂಡಿದ್ದ. ಕಳೆದ 15 ದಿನದಿಂದ ತೀವ್ರ ವಿಚಾರಣೆ ನಡೆಸಿ ಮಹತ್ವದ ದಾಖಲೆಗಳನ್ನ ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು, ಬುರುಡೆ ಮ್ಯಾನ್‌ನನ್ನ ಜೈಲಿಗಟ್ಟಿದ್ದಾರೆ.