ಉರಿ ಬಿಸಿಲಿನಲ್ಲಿ ರೈತರ ಉರುಳು ಸೇವೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮುಳಗುಂದ ನಾಕಾದಿಂದ ಜಿಲ್ಲಾಡಳಿತದವರೆಗೂ ಬಗರ್‌ಹುಕುಂ ಸಾಗುವಳಿದಾರ ರೈತರು ಉರಿ ಬಿಸಿಲಿನಲ್ಲಿ ಉರುಳು ಸೇವೆ ಮಾಡುವ ಮುಲಕ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.

Advertisement

ಕಳೆದ 20 ದಿನಗಳಿಂದ ಉತ್ತರ ಕರ್ನಾಟಕ ಮಹಾಸಭಾ ನೇತೃತ್ವದಲ್ಲಿ ಬಗರ್‌ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ, ನಾಗಾವಿ ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಅಥವಾ ಪರ್ಯಾಯ ಜಮೀನು ನೀಡುವಂತೆ ಆಗ್ರಹಿಸಿ ರೈತರು ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಂಡಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತಿವ್ರಗೊಳ್ಳುತ್ತಿದೆ. ಶನಿವಾರ ನೂರಾರು ಸಂಖ್ಯೆಯ ರೈತರು, ಮಹಿಳೆಯರು ನಗರದ ಮುಳಗುಂದ ನಾಕಾದಿಂದ ಉರಿ ಬಿಸಿಲಿನಲ್ಲಿ, ಸುಡುವ ದಾರಿಯ ಮೇಲೆ ಮಲಗಿ ಉರಳುತ್ತಾ ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ಧ ಘೋಷಣೆ ಕುಗೂತ್ತಾ ಜಿಲ್ಲಾಡಳಿತ ಭವನದವರೆಗೂ ಹಕ್ಕುಪತ್ರಕ್ಕಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳದಲ್ಲಿ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಕಳೆದ ಇಪ್ಪತ್ತು ದಿನಗಳಿಂದ ಮನೆ-ಮಠ ಬಿಟ್ಟು ರೈತರು ಪ್ರತಿಭಟನೆಗೆ ಕುಳಿತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ, ನಮ್ಮ ರೈತರ ಸಮಸ್ಯೆ ಅವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಕಳೆದ ಬಾರಿ ಸಮಸ್ಯೆ ಪರಿಹರಿಸುವಂತೆ ತಿಳಿಸಿ, ಇಲ್ಲಿಯವರೆಗೂ ಯಾವ ಪರಿಹಾರವೂ ಇಲ್ಲದೆ ನಮ್ಮ ಸಮಸ್ಯೆಗಳನ್ನು ಆಲಿಸದೆ ಇರುವುದು ರೈತರಲ್ಲಿ ಬೇಸರ ಮೂಡಿಸಿದೆ. ಸಚಿವರು ಬಂದು ನಮಗೆ ಕೊಟ್ಟ ಮಾತಿನಂತೆ ನಮ್ಮ ಸಮಸ್ಯೆ ಪರಿಹರಿಸುವವರೆಗೂ ನಮ್ಮ ಹೋರಾಟದ ತೀವ್ರತೆಯನ್ನು ನಾವು ತೋರಿಸುತ್ತೇವೆ ಎಂದರು.

ಕರ್ನಾಟಕ ರಾಜ್ಯ ರೈತರ ಸಂಘ, ರೈತ ಮೋರ್ಚಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ರಮೇಶ ಮಜ್ಜೂರ, ಚಂಬಣ್ಣ ಪರಸಾಪೂರ, ಶಾಂತವ್ವ ನಾಗಾವಿ, ಸೋಮನಾಥ ಜಾಧವ, ನಾಮದೇವ ಮಾಂಡ್ರೆ, ನಬಿಸಾಬ ನದಾಫ್, ಈಶಪ್ಪ ಕಡಕೋಳ, ದ್ಯಾಮಣ್ಣ ಲಮಾಣಿ, ಫಿರೋಜ್ ನದಾಫ್, ಖಾದೀರ್ ಸಾಬ್, ಮಹಮ್ಮದ್ ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಶಿರಹಟ್ಟಿ, ಲಕ್ಷ್ಮೇಶ್ವರ, ಎಲ್ಲಾಪೂರ, ಮುರುಡಿ ಹಾಗೂ ಗ್ರಾಮದ ರೈತರು ಭಾಗವಹಿಸಿ, ಅರಣ್ಯ ಅವಲಂಬಿತ ಬಗರಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಬಗರ್‌ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಒಂದಲ್ಲಾ ಒಂದು ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದು, ದೀಡ್ ನಮಸ್ಕಾರ, ಉರುಳು ಸೇವೆ, ಪೊರಕೆ ಚಳುವಳಿ ಹಾಗೂ ನಗರದ ಜಿಲ್ಲಾಡಳಿತ ಭವನದ ಎದುರು ರೊಟ್ಟಿ ಬಡಿಯುವ ಚಳುವಳಿಗೆ ನಿರ್ಧರಿಸಲಾಗಿದೆ ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here