ಮಂಡ್ಯ:- ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಎದುರಾಗಿದೆ.
ಭಾನುವಾರ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ ಅನ್ಯಕೋಮಿನ ಯುವಕರು ಕಲ್ಲು ತೂರಾಟ ಮಾಡಿರುವ ಘಟನೆ ಮಂಡ್ಯದ ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಜರುಗಿದೆ.
ಬೀದಿ ಬೀದಿಯಲ್ಲಿ ಮೆರವಣಿಗೆ ಮೂಲಕ ಬಂದ ಗಣಪ ಇನ್ನೇನು ಮಸೀದಿ ಮುಂದೆ ಹಾದುಹೋಗಬೇಕಿತ್ತು. ಈ ವೇಳೆ, ದಿಢೀರ್ ಲೈಟ್ ಆಫ್ ಮಾಡಿ ಮಸೀದಿಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೊಣ್ಣೆಗಳನ್ನು ಕೂಡ ಎಸೆದಿದ್ದಾರೆ ಎಂದು ಸ್ಥಳದಲ್ಲಿದ್ದವರು ದೂರಿದ್ದಾರೆ. ಘಟನೆಯಲ್ಲಿ ನಾಲ್ವರು ಹೋಂಗಾರ್ಡ್ಗಳು ಸೇರಿ 8 ಜನರು ಗಾಯಗೊಂಡಿದ್ದಾರೆ.
ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು. ಮೈಕ್ ಹಾಕಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಮೈಕ್ ಆಫ್ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಇದಾದ ಬಳಿಕ ಏಕಾಏಕಿ ಲೈಟ್ ಆಫ್ ಮಾಡಿ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆ ಎಂದು ಹಿಂದೂಗಳು ಆರೋಪಿಸಿದ್ದಾರೆ. ನಾವು ಸುಮ್ಮನಿದ್ದರೂ ನಮ್ಮ ಮೇಲೆ ಈ ರೀತಿ ದಾಳಿ ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅವರ ಹಬ್ಬ ಮಾಡಿದಾಗ ನಾವು ಗಲಾಟೆ ಮಾಡಿದ್ದೆವಾ ಎಂದುಹಿಂದೂಗಳು ಪ್ರಶ್ನೆ ಮಾಡಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್‌ಪಿ ಬಾಲದಂಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಈ ವಿಚಾರವಾಗಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ತಮಿಳುನಾಡು ಕಾಲನಿಯಿಂದ ಹೊರಟ ಮೆರವಣಿಗೆಯ ಸಂದರ್ಭದಲ್ಲಿ ಒಂದು ಮಸೀದಿಯ ಬಳಿ ಕಲ್ಲು ತೂರಾಟ ನಡೆದಿದೆ. ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು, ಕರೆಂಟ್ ಕೂಡ ಆಫ್ ಆಯಿತು ಎಂದು ವರದಿಯಾಗಿದೆ ಎಂದಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿದ್ದು, 21 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.


