ಮಂಡ್ಯ:- ಅಲ್ಪಸಂಖ್ಯಾತರ ಹೆಸರಿನ ಪುಂಡರ ಅಟ್ಟಹಾಸ ಭಯದ ವಾತಾವರಣ ನಿರ್ಮಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಮದ್ದೂರು ಗಣೇಶ ಮೆರವೆಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತ ನಡೆಯುತ್ತಿರುವಂತೆ ಭಾಸವಾಗುತ್ತಿದೆ ಎಂದರು. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಹಾಗೂ ಮೆರವಣಿಗೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ಉಂಟಾಗಿದೆ. ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಂತೂ ಮತಾಂಧ ಪುಂಡರು ಗುಂಪು ಕಟ್ಟಿಕೊಂಡು ಕಲ್ಲು ತೂರುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನೋಡುತ್ತಿದ್ದರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಸರ್ಕಾರದ ಈ ಪಕ್ಷಪಾತ ಹಾಗೂ ಮೃದು ಧೋರಣೆ ರಾಜ್ಯದಲ್ಲಿ ಅರಾಜಕತೆ ಉಂಟಾಗಲು ಕಾರಣವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಪಸಂಖ್ಯಾತರ ಹೆಸರಿನ ಪುಂಡರ ಈ ಪರಿಯ ಅಟ್ಟಹಾಸ ಹಿಂದೂ ಧರ್ಮಿಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಭಯಗ್ರಸ್ತ ವಾತಾವರಣವನ್ನುಂಟು ಮಾಡಿದೆ. ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಪೊಲೀಸ್ ಠಾಣೆಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆದರೂ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗುತ್ತಿಲ್ಲ. ಮದ್ದೂರಿನ ಹಾಗೂ ಸಾಗರದ ಘಟನೆಯ ಕುರಿತು ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳದಿದ್ದರೆ, ಮತಾಂಧ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರುಗಿಸದಿದ್ದರೆ ರಾಜ್ಯದ ಜನರೇ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.



