ನವದೆಹಲಿ:- ಈ ಸರ್ಕಾರಕ್ಕೆ ಮದ್ದೂರು ಗಲಭೆ ತಡೆಯೋ ಯೋಗ್ಯತೆಯೇ ಇಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆಗೆ ಮಸೀದಿಯಿಂದ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಈ ಗಲಭೆಯನ್ನು ತಡೆಯುವ ಯೋಗ್ಯತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಕಿಡಿಕಾರಿದರು.
ಹಿಂದಿನ ಗಲಭೆ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಕೊಡುವ ರೀತಿ ನಡೆದುಕೊಂಡಿದ್ದರಿಂದಲೇ ಇಂಥ ಕೃತ್ಯಗಳು ಮರುಕಳಿಸಲು ಕಾರಣ ಎಂದು ಆರೋಪಿಸಿದರು. ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ. ಹಾಗಾಗಿಯೇ ಕಲ್ಲು ತೂರಾಟ ನಡೆದಿದೆ. ಇನ್ನು, ಸೋಮವಾರ ಬೆಳಗ್ಗೆ ಗಣೇಶ ವಿಸರ್ಜನೆಗೆ ಮುಂದಾದ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೆಲ್ಲ ಸರ್ಕಾರದ ಹಿಂದೂ ವಿರೋಧಿ ಮಾನಸಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಖಂಡಿಸಿದರು.



