ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ತೇರಿನಮನೆಯ ಹತ್ತಿರ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸೋಮವಾರ ಸಾಂಸ್ಕೃತಿಕ ವಾದ್ಯ ಮೇಳಗಳ ವಿಜೃಂಭಣೆಯೊಂದಿಗೆ ಶೃದ್ಧಾ, ಭಕ್ತಿಯಿಂದ ನೆರವೇರಿತು.
ಮೆರವಣಿಗೆಗೆ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡಾದ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಚಾಲನೆ ನೀಡಿದರು. ಈ ವೇಳೆ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ, ವಿಘ್ನನಿವಾರಕ ಗಣೇಶನ ಹಬ್ಬವನ್ನು ಪಟ್ಟಣದಲ್ಲಿ ಎಲ್ಲೆಡೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ಸೇವೆಯ ಅದ್ದೂರಿಯಾಗಿ ಆಚರಿಸುತ್ತಿರುವದು ಮೆಚ್ಚುಗೆಯ ಸಂಗತಿಯಾಗಿದೆ. ಹಬ್ಬಗಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕವಾಗಿವೆ. ಡಿಜೆ ನಮ್ಮ ಸಂಸ್ಕೃತಿಯಲ್ಲ. ಬದಲಾಗಿ ಅಬ್ಬರದ ಡಿಜೆ ಬಳಕೆಯಿಂದ ಹಸುಗೂಸುಗಳು, ಗರ್ಭಿಣಿಯರು, ಪುಟಾಣಿ ಮಕ್ಕಳು, ಹಿರಿಯರು, ಆರೋಗ್ಯ ಸಮಸ್ಯೆ ಇರುವವರು ಸೇರಿ ಎಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಡಿಜೆ ಬದಲಾಗಿ ನಮ್ಮ ನಾಡಿನ ಜಾನಪದ ಕಲಾ ತಂಡಳೊಂದಿಗೆ ಗಣೇಶ ವಿಸರ್ಜನೆ ಮಾಡಿದರೆ ನಮ್ಮ ಸಂಸ್ಕೃತಿ, ಕಲೆಯನ್ನು ಉಳಿಸಿದಂತಾಗುತ್ತದೆ. ಹಬ್ಬದ ಆಚರಣೆಗಳು ಅರ್ಥಪೂರ್ಣ, ಸಮಾಜೋಪಯೋಗಿಯಾಗಿರಬೇಕು. ಆಚರಣೆಗಳ ನೆಪದಲ್ಲಿ ಸಾಮಾಜಿಕ ಸ್ವಾಸ್ಥ್ಯ, ನೆಮ್ಮದಿ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಈ ವೇಳೆ ಕವಿತಾ ಶರಸೂರಿ, ಶೋಭಾ ಮೆಣಸಿನಕಾಯಿ, ವಾಣಿ ಹತ್ತಿ, ಮಂಜುಳಾ ಗುಂಜಳ, ಮಹಾದೇವಪ್ಪ ಅಣ್ಣಿಗೇರಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಪೂರ್ಣಾಜಿ ಖರಾಟೆ, ಪ್ರಕಾಶ ಮುಳಗುಂದ, ಸುರೇಶ ಚೌಕನವರ, ಗಂಗಾಧರ ಉಮಚಗಿ, ಬಸವರಾಜ ಮೆಣಸಿನಕಾಯಿ, ಗಂಗಾಧರ ಶಿಗ್ಲಿಮಠ, ಬಸವಣ್ಣೆಪ್ಪ ನಂದೆಣ್ಣವರ, ಮಯೂರಗೌಡ ಪಾಟೀಲ, ಸಂತೋಷ ಜಾವೂರ, ಶಿವು ಹೊಟ್ಟಿ, ರಾಜಶೇಖರ ಶಿಗ್ಲಿಮಠ, ಚಂದ್ರು ಹುರಕಡ್ಲಿ, ನೀಲಪ್ಪ ಯತ್ನಳ್ಳಿ, ಭರಮಪ್ಪ ಕೊಡ್ಲಿ, ಈರಣ್ಣ ಆದಿ, ರಾಮಣ್ಣ ಗೌರಿ ಸೇರಿದಂತೆ ಸಮಿತಿ ಸದಸ್ಯರು, ಸಾರ್ವಜನಿಕರು ಇದ್ದರು.
ಹಾವೇರಿ ಜಿಲ್ಲೆಯ ಜಾಂಜ್ ಮೇಳದ ನಾದ ವೈವಿಧ್ಯ, ಲಕ್ಷ್ಮೇಶ್ವರದ ಕುದುರೆಕಾರರ ಕುಣಿತ, ನಂದಿಕೋಲ ಕುಣಿತದ ಕಲಾ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು. ಜೊತೆಗೆ ದೊಡ್ಡ ಮತ್ತು ಸಣ್ಣ ಗೊಂಬೆಗಳ ವೇಷಧಾರಿಗಳು ನಾದಕ್ಕೆ ತಕ್ಕಂತೆ ಕುಣಿದು ತಮ್ಮೊಂದಿಗೆ ಜನರನ್ನು ಕುಣಿಯುವಂತೆ ಪ್ರೇರೇಪಿಸುತ್ತಾ ಮೆರವಣಿಗೆಯಲ್ಲಿ ಆಕರ್ಷಣೆ ಹೆಚ್ಚಿಸಿದರು.



