ಕೆರೆ ಒತ್ತುವರಿ ಕುರಿತು ತನಿಖೆಯಾಗಲಿ: ಚಂದ್ರಕಾಂತ ಚವ್ಹಾಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಷ್ಮೇಶ್ವರ ತಾಲೂಕಿನ ಹಿರೇಮಲ್ಲಾಪುರ ಗ್ರಾಮದಲ್ಲಿ ಖಾಸಗಿ ಎಥೆನಾಲ್ ಕಂಪನಿಯೊಂದು ಮೋಸದಿಂದ ರೈತರ ಜಮೀನು ಖರೀದಿಸಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕೆರೆಯನ್ನು ಒತ್ತುವರಿ ಮಾಡಿಕೊಂಡು ಅದನ್ನು ಮುಚ್ಚುವ ಕೆಲಸ ಮಾಡುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಆರೋಪಿಸಿದರು.

Advertisement

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶತಮಾನಗಳಿಂದ ಇದ್ದ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ತನಿಖೆಯಾಗಬೇಕು. ಈ ಬಗ್ಗೆ ಪ್ರಶ್ನಿಸುವವರಿಗೆ ಕೆಲ ಬಂಡವಾಳಶಾಹಿಗಳು ಬೆದರಿಕೆ ಒಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಮಧ್ಯವರ್ತಿಗಳ ಮೂಲಕ ರೈತರಿಂದ ಸುಮಾರು 37 ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿ ಮಾಡಲಾಗಿದೆ. ಎಥೆನಾಲ್ ಉತ್ಪಾದನೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಎಥೆನಾಲ್ ಉತ್ಪಾದನೆಗೆ ಅಪಾರ ಪ್ರಮಾಣದ ನೀರಿನ ಅಗತ್ಯವಿದ್ದು, ಘಟಕದ ತ್ಯಾಜ್ಯದಿಂದ ಜಲಮೂಲಕ್ಕೆ ಹಾನಿಯಾಗಲಿದೆ. ಸದರಿ ಘಟಕ ಆರಂಭವಾದರೆ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿದರು.

ಕೆರೆ ಒತ್ತುವರಿ ಮತ್ತು ಈ ಘಟಕದಿಂದ ರೈತರು ಮತ್ತು ಪರಿಸರಕ್ಕೆ ಆಗುತ್ತಿರುವ ಹಾನಿ ಖಂಡಿಸಿ ಸೆ. 12ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳಾದ ಈಶಪ್ಪ ನಾಯ್ಕರ್, ಬಾಷಾಸಾಬ ಮಲ್ಲಸಮುದ್ರ, ವಿಕಾಸ ಕ್ಷೀರಸಾಗರ, ರಮೇಶ ಹಂಗನಕಟ್ಟಿ, ಶರೀಫ್ ಬೆನಕಲ್ಲ, ಹೊಳಲಪ್ಪ ತಳವಾರ, ಈಶ್ವರ ಲಕ್ಷ್ಮೇಶ್ವರ, ರಜಾಕ್ ಮಹಮ್ಮದ, ಬಸವರಾಜ ಕಡಕೋಳ, ನಾಗರಾಜ ಉಪ್ಪಾರ, ಹಾಲಪ್ಪ ಭಂಡಾರಿ, ರಮೇಶ ರಾಠೋಡ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here