ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಮಾರ್ಗಸೂಚಿಯನ್ವಯ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಕ್ಟೋಬರ್ 1ರಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾಗುವುದು. ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಾಗರಿಕರಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸೆಪ್ಟೆಂಬರ್ 19ರಂದು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥಿತವಾಗಿ ಏರ್ಪಡಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಕೆ. ಮಹಾಂತೇಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ವಿಡಿಯೋ ಕಾನ್ಫರನ್ಸ್ ಹಾಲ್ನಲ್ಲಿ ಸೋಮವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜರುಗಿದ ಪೂರ್ವಭಾವಿ ಸಭೆಯಲ್ಲಿ ವರು ಮಾತನಾಡಿದರು.
ಸೆ.19ರಂದು ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಏರ್ಪಡಿಸಲಾಗುವುದು. ಮಹಿಳೆಯರಿಗೆ ಮತ್ತು ಪುರುಷರಿಗಾಗಿ 60-69, 70-79 ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಹೀಗೆ ವಿಭಾಗಗಳನ್ನು ಮಾಡಲಾಗಿದ್ದು, ಕ್ರೀಡಾ ಸ್ಪರ್ಧೆಯಲ್ಲಿ ಬಿರುಸಿನ ನಡಿಗೆ, ಬಕೆಟ್ನಲ್ಲಿ ಬಾಲ್ ಎಸೆಯುವುದು, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
60-69, 70-79 ಹಾಗೂ 80 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಾಗೂ ಪುರಷರಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳಾದ ಏಕಪಾತ್ರ ಅಭಿನಯ ಹಾಗೂ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಹಿರಿಯ ನಾಗರಿಕರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕೆ.ಮಹಾಂತೇಶ್ ತಿಳಿಸಿದರು.
ಸಭೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆ ವ್ಯವಸ್ಥೆ, ಉಪಹಾರ ವ್ಯವಸ್ಥೆ, ಆಸನದ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ, ಗದಗ ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜಿ.ಎಸ್. ಹಿರೇಮಠ, ಕ.ರಾ.ಹಿ.ನಾ ಹಾಗೂ ನಿ.ನೌ ಸಂಘದ ಎಸ್.ಕೆ. ಖಂಡಪ್ಪಗೌಡ್ರ, ಗದಗ ಪ್ರೋಬಸ್ ಕ್ಲಬ್ ಅಧ್ಯಕ್ಷ ಬಿ.ಎಸ್. ಗೌಡರ, ಜಿ.ಎಂ. ಯನಮಶೆಟ್ಟೆ, ಡಾ.ರಾಜೇಂದ್ರ ಗೋಡಬೋಲೆ, ಗದಗ ಜಿಲ್ಲಾ ಬ್ಯಾಂಕ್ ನಿವೃತ್ತರ ಸಂಘದ ಅಧ್ಯಕ್ಷ ಬಸವರಾಜ ತೋಟಗೇರ, ಹಿರಿಯ ನಾಗರಿಕರ ಸಂಘದ ತಾಲೂಕು ಘಟಕದ ಅಧ್ಯಕ್ಷರು, ಹಿರಿಯ ನಾಗರಿಕರು, ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಮಾತನಾಡಿ, ವಿಶ್ವ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡೆಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ತಿಳಿಸಿದರು.


