ಸಿಎಂ ಸಿದ್ದರಾಮಯ್ಯರಂತೆ ಮತ್ತೊಬ್ಬರಿಲ್ಲ: ಡಿ.ಆರ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಕುರುಬರ ಸಂಘದ ರಜತ ಮಹೋತ್ಸವ ಹಾಗೂ ಸಂಘಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಸಮಾರಂಭವನ್ನು ಸೆ.20ರಂದು ನಗರದ ಕನಕ ಭವನದಲ್ಲಿ ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು.

Advertisement

ನಗರದ ದೇವರಾಜ ಅರಸು ವಸತಿ ನಿಲಯದಲ್ಲಿ ಈ ಕುರಿತು ಕರೆದಿದ್ದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಗಣ್ಯರು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲರೂ ಸಂಘಟಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಮತ್ತೊಬ್ಬರಿಲ್ಲ. ಅವರು ಗದಗ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಲ್ಲದೆ, ಕುರುಬರ ಸಂಘದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯಾಗಿ ಆಗಮಿಸುತ್ತಿರುವುದು ಕಾಕತಾಳೀಯವೂ ಆಗಿದೆ. ಗದುಗಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗನ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಸಾಕಷ್ಟು ಜನರಿಗೆ ಅನುಕೂಲ ಕಲ್ಪಿಸಿರುವುದು ಹೆಮ್ಮೆಯ ಸಂಗತಿ. ಅಲ್ಲದೆ, ಸಂಘಜೀವಿ ಪಕೀರಪ್ಪ ಹೆಬಸೂರ ಅವರ ಜೀವಮಾನ ಸಾಧನೆಯ ಕುರಿತು ಅಭಿನಂದನಾ ಗ್ರಂಥ ಹೊರಬರುತ್ತಿರುವದು ಸಂಭ್ರಮ ಇಮ್ಮಡಿಗೊಳಿಸಿದೆ. ಅವರು ಕುರುಬ ಸಮಾಜಕ್ಕೆ ಮಾತ್ರವಲ್ಲ, ಗದಗ ಜಿಲ್ಲೆಗೆ ದೊಡ್ಡ ಆಸ್ತಿಯಾಗಿದ್ದಾರೆ ಎಂದು ಹೇಳಿದರು.

ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ, ಈ ಕಾರ್ಯಕ್ರವನ್ನು ಅದ್ದೂರಿಯಾಗಿ ಆಚರಿಸಲು ಗದಗ ಜಿಲ್ಲೆ ಸೇರಿದಂತೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಾರ ಮಾಡಿ ಜನರನ್ನು ಸಂಘಟಿಸೋಣ ಎಂದು ಹೇಳಿದರು.

ಗಣ್ಯ ಉದ್ಯಮಿ ಪ್ರಕಾಶ ಕರಿ ಮಾತನಾಡಿ, ಸಮಾಜದ ಈ ಕಾರ್ಯಕ್ರಮಕ್ಕೆ ನಾನೂ ಕೂಡ ತನು-ಮನದಿಂದ ಸಹಾಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ರಾಜ್ಯ ನಿರ್ದೇಶಕಿ ಚನ್ನಮ್ಮ ಹುಳಕಣ್ಣವರ ಮಾತನಾಡಿ, ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಮಹಿಳೆಯರನ್ನು ಸಂಘಟಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.

ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಶಶಿಧರ ರೊಳ್ಳಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಯುವ ಘಟಕದ ನೇತೃತ್ವದಲ್ಲಿ ಕಾಗಿನೆಲೆಯಿಂದ ಗದುಗಿನವರೆಗೆ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೆ. 20ರಂದು ಗದುಗಿಗೆ ಜ್ಯೋತಿಯಾತ್ರೆ ಆಗಮನವಾಗಲಿದೆ. ಇದಕ್ಕೂ ಮುನ್ನ ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕುಗಳಿಗೂ ಜ್ಯೋತಿಯಾತ್ರೆ ಸಂಚರಿಸಿ ಕಾರ್ಯಕ್ರಮದ ಕುರಿತು ಪ್ರಚಾರ ಮಾಡಲಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಫಕೀರಪ್ಪ ಹೆಬಸೂರ ಮಾತನಾಡಿ, ಸಮಾಜಕ್ಕೆ ಒಳ್ಳೆಯನ್ನು ಮಾಡಿದರೆ ಸಮಾಜವು ನಮಗೆ ಒಳ್ಳೆಯದನ್ನೇ ಮಾಡುತ್ತದೆ ಎನ್ನುವುದಕ್ಕೆ ಸಮಾಜ ಬಾಂಧವವರು ನನ್ನನ್ನು ತುಂಬು ಹೃದಯದಿಂದ ಗೌರವಿಸುತ್ತಿರುವದು ನನಗೆ ಸಮಾಜವನ್ನು ಮುನ್ನಡೆಸಲು ಮತ್ತಷ್ಟು ಶಕ್ತಿ ತುಂಬಿದೆ ಎಂದರು.

ಈ ಸಂದರ್ಭದಲ್ಲಿ ಕುರುಬರ ಸಂಘದ ರಾಜ್ಯ ನಿರ್ದೇಶಕ ಕಳಕನಗೌಡ ಗೌಡ್ರ, ಹಿರಿಯರಾದ ಸೋಮಕಟ್ಟಿಮಠ, ಹಿರಿಯ ಶಿಕ್ಷಕರಾದ ಸುರೇಶ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಸ್. ಕರಡಿ ಸ್ವಾಗತಿಸಿದರು. ನೀಲಕಂಠ ಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ. ಕಂಬಳಿ ವಂದಿಸಿದರು.

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಸಂಘಟಿಸಿ, ಶಾಶ್ವತ ನೆಲೆ ಕಲ್ಪಿಸಿ, ರಜತ ಮಹೋತ್ಸವ ಆಚರಿಸಲು ಕಾರಣೀಕರ್ತರಾಗಿರುವ ಹಿರಿಯರಾದ ಫಕೀರಪ್ಪ ಹೆಬಸೂರ ಅವರ ಸಾಧನೆ ಅವಿಸ್ಮರಣೀಯ. ಇದೇ ಸಂದರ್ಭದಲ್ಲಿ ಅವರ ಜೀವಮಾನ ಸಾಧನೆಯನ್ನು ಗುರುತಿಸಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿರುವುದು ಸೂಕ್ತವಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here