ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಕಳೆದ ತಿಂಗಳು ಲೋಕಾರ್ಪಣೆಗೊಂಡಿರುವ ಶ್ರೀ ಗಣೇಶ ದೇವಸ್ಥಾನಕ್ಕೆ ಮಂಗಳವಾರ ಗುಜರಾತ್‌ನ ಭರೂಚ್ ಜಿಲ್ಲೆಯ ಜಗಡಿಯಾ ಗ್ರಾಮದ ಶ್ರೀ ಕರ್ಷಣಿ ವಸುದೇವಾನಂದ ಮಹಾರಾಜ್‌ರು ಭೇಟಿ ನೀಡಿದರು.
ದೇವಸ್ಥಾನವನ್ನು ವೀಕ್ಷಿಸಿದ ಶ್ರೀಗಳು, ಕಟ್ಟಡ ವಾಸ್ತು ರೀತಿಯಲ್ಲಿ ಹಾಗೂ ಸುಂದರವಾಗಿ ನಿರ್ಮಾಣವಾಗಿರುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಿತಿ ಸದಸ್ಯರು ಶ್ರೀಗಳಿಗೆ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ದೇವಸ್ಥಾನಗಳ ನಿರ್ಮಾಣ ಮಾಡುವುದರೊಂದಿಗೆ ಅಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವದು ಅವಶ್ಯವಾಗಿದೆ. ದೇವಸ್ಥಾನಗಳು ನೆಮ್ಮದಿಯ ಕೇಂದ್ರಗಳಾಗಬೇಕು. ಅಲ್ಲಿ ಪೂಜೆ ಪುನಸ್ಕಾರಗಳು ಸಂಪ್ರದಾಯದಂತೆ ನಡೆದುಕೊಂಡು ಬರುವಂತೆ ಮಾಡುವದು ಅವಶ್ಯವಾಗಿದೆ. ಲಕ್ಷ್ಮೇಶ್ವರದ ವ್ಯಾಪಾರಸ್ಥರು ಸೇರಿ ಸುಂದರವಾಗಿ ಕಲ್ಲಿನ ದೇವಸ್ಥಾನ ನಿರ್ಮಾಣ ಮಾಡಿರುವದು ಉತ್ತಮ ಬೆಳವಣಿಗೆಯಾಗಿದ್ದು, ಇಲ್ಲಿ ನಿರಂತರವಾಗಿ ಕಾರ್ಯಚಟುವಟಿಕೆಗಳು ನಡೆದು ಇಲ್ಲಿನ ವ್ಯಾಪಾರ-ವಹಿವಾಟು ಉತ್ತಮವಾಗಿ ಬೆಳವಣಿಗೆ ಹೊಂದಲಿ ಎಂದು ಆಶೀರ್ವದಿಸಿದರು.
ನಂತರ ಶ್ರೀಗಳು ಹತ್ತಿರದ ಫೀನಿಕ್ಸ್ ಇಂಟರ್‌ನ್ಯಾಷನಲ್ ಶಾಲೆಗೆ ತೆರಳಿ ಅಲ್ಲಿನ ಪುಟಾಣಿ ಮಕ್ಕಳೊಂದಿಗೆ ಕೆಲ ಕಾಲ ಕಳೆದರು. ಈ ವೇಳೆ ಎಪಿಎಂಸಿ ವರ್ತಕರ ಮಂಡಳಿ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ, ಚಂಬಣ್ಣ ಬಾಳಿಕಾಯಿ, ರಾಜಣ್ಣ ಕೊಟಗಿ, ರಾಜಶೇಖರಯ್ಯ ಹಾಲೇವಾಡಿಮಠ, ಬಸವರಾಜ ಅಂಗಡಿ, ಅನಿಲ ಮುಳಗುಂದ, ಎಸ್.ಎಂ. ಕಗ್ಗಲಗೌಡ್ರ ಮುಂತಾದವರಿದ್ದರು.



