ಗದಗ:- ಹಸಿದವರ ಹೊಟ್ಟೆ ತುಂಬಿಸಲು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಲೂಟಿಕೋರರ ಪಾಲಾಗುತ್ತಿದೆ.
ಎಸ್, ಗದಗ ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಆಹಾರ ಇಲಾಖೆ ಹಾಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನುಸುತ್ತಿದ್ದ ಖದೀಮರ ಬಣ್ಣ ಬಯಲು ಮಾಡಲಾಗಿದೆ. ಗದಗನ ಬೆಟಗೇರಿಯ ವಸಂತ ಸಿಂಗ್ ಜಮಾದಾರ ಬಡಾವಣೆಯಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಖಾಲಿ ಜಾಗದಲ್ಲಿ ರೈತರು ರಾಶಿ ಮಾಡ್ತಾಯಿರೋ ಜಾಗದಲ್ಲಿ, ಅಕ್ಕಿ ದಂಧೆಕೋರರು ಅಕ್ಕಿಯನ್ನು ಸಂಗ್ರಹಣೆ ಮಾಡಿದ್ರು. ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಅನುಮಾನ ಬಾರದೆ ಇರಲಿ ಎಂದು ರಾಶಿ ಮಾಡುವ ಹಾಗೇ ನಾಟಕ ಮಾಡ್ತಾಯಿದ್ರು.. ಆದ್ರೆ, ಪೊಲೀಸರು ದಂಧೆಕೋರರ ನಾಟಕವನ್ನು ಬಯಲು ಮಾಡಿದ್ದಾರೆ. 30 ಪಡಿತರ ಚೀಲವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಕ್ರಮ ಅಕ್ಕಿ ದಂಧೆ ಮಾಡ್ತಾಯಿದ್ದ ಶ್ರೀಕಾಂತ್ ಭಜಂತ್ರಿ ಎನ್ನುವಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಎಸ್ಪಿ ರೋಹನ್ ಜಗದೀಶ್ ಹೇಳಿದ್ದೇನು?
ಜಿಲ್ಲೆಯ ಲಕ್ಷ್ಮೇಶ್ವರ, ನರಗುಂದ, ರೋಣ, ಗಜೇಂದ್ರಗಡ, ಶಿರಹಟ್ಟಿ, ಸೇರಿದಂತೆ ಮುಂಡರಗಿ ತಾಲೂಕಿನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎನ್ನುವ ಅನುಮಾನವಿದೆ. ಇನ್ನೂ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ನಿವಾಸಿಯಾದ ನಿಲ್ಲವ್ವ ಸಂಕಣ್ಣವರ 29 ಚೀಲ್, ಹಾಗೂ ಬಸವಣ್ಣೆಪ್ಪ ಸಂಕನ್ನವರ ಅವ್ರ 32 ಚೀಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಹಾಗೇ ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ ಬೂದಪ್ಪ ಕುರಿ ಎನ್ನುವಾತನ ಮನೆಯಲ್ಲಿ 203 ಚೀಲ್ ಅಕ್ಕಿಯನ್ನು ಸಂಗ್ರಹಣೆ ಮಾಡಲಾಗಿತ್ತು. ಮುಂಡರಗಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆಯಲಾಗಿದೆ. ಗದಗ ಜಿಲ್ಲೆಯಲ್ಲಿ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಡೆ ದಾಳಿ ಮಾಡಲಾಗಿದ್ದು, ಅಪಾರ ಪ್ರಮಾಣದ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಈ ಅಕ್ಕಿಯನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಒಟ್ಟಾರೆ ಸರ್ಕಾರ ಬಡವರು ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ.. ಆದ್ರೆ ಅಕ್ಕಿ ದಂಧೆಕೋರರು ಇದನ್ನೇ ಲಾಭವನ್ನಾಗಿ ಮಾಡಿಕೊಂಡು, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಒಟ್ನಲ್ಲಿ ಅಕ್ರಮವಾಗಿ ಸಾಗಿಸಲು ಪ್ಲಾನ್ ಮಾಡಿದ್ದ, ದಂಧೆಕೋರರ ಹೆಡಮುರಿ ಕಟ್ಟುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.