ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದಿಂದ ಉತ್ಪತ್ತಿಯಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಬುಧವಾರ ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯಪಾಲರು ಈ ಮಸೂದೆಗೆ ಸೆ. 9ರಂದು ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಿದ್ದು, ಮುಂದಿನ ಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಗಾಗಿ ಕಾಯಲಾಗುತ್ತಿದೆ. ಈ ಕಠಿಣ ಕ್ರಮದ ಮೂಲಕ, ಅಕ್ರಮ ಗಣಿಗಾರಿಕೆಯ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತು ವಸೂಲಾತಿಗಾಗಿ ಪ್ರತ್ಯೇಕ ಅಧಿಕಾರಿ (ಆಯುಕ್ತರು) ನೇಮಕ ಮಾಡಲು ಕಾನೂನಿನ ಅವಕಾಶ ದೊರೆತಿದೆ ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜುಲೈ 2ರಂದು ನಡೆದ ಸಂಪುಟ ಸಭೆಯಲ್ಲಿ ಗಣಿ ಹಗರಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲು ಸಂಪುಟ ಉಪಸಮಿತಿಯನ್ನು ರಚಿಸಲಾಯಿತು. ಉಪಸಮಿತಿಯು ಆಗಸ್ಟ್ 12ರಂದು ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು ಎಂದರು.
ಆ ವರದಿಯಲ್ಲಿ, ವಸೂಲಾತಿ ಆಯುಕ್ತರನ್ನು ನೇಮಕ ಮಾಡುವ ಬಗ್ಗೆ ಕರಡು ಮಸೂದೆಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಆಗಸ್ಟ್ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆಗಸ್ಟ್ 21ರಂದು ವಿಧಾನಸಭೆಯಲ್ಲಿ ಮತ್ತು 22ರಂದು ವಿಧಾನ ಪರಿಷತ್ತಿನಲ್ಲಿ ಈ ಮಸೂದೆ ಪಾಸ್ ಆಯಿತು. ಬಳಿಕ ಅದನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಲಾಗಿತ್ತು ಎಂದು ತಿಳಿಸಿದರು.
ಈ ಅಧಿನಿಯಮದ ಮೂಲಕ, ಕನ್ನಡ ನಾಡಿನ ಆಸ್ತಿಯನ್ನು ಮರಳಿ ತರಲು ಸಾಧ್ಯವಾಗಿದ್ದು, ಈ ಯಶಸ್ಸಿಗಾಗಿ ಮುಖ್ಯಮಂತ್ರಿಗಳು ಮತ್ತು ಮಸೂದೆಗೆ ಅಂಕಿತ ಹಾಕುವ ಮೂಲಕ ಸಹಕರಿಸಿದ ರಾಜ್ಯಪಾಲರನ್ನು ಅಭಿನಂದಿಸುವುದಾಗಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅಕ್ರಮ ಗಣಿಗಾರಿಕೆ ನಷ್ಟ ವಸೂಲಾತಿ ಮತ್ತು ಜಪ್ತಿಗಾಗಿ ಅಪರ ಮುಖ್ಯ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಅಥವಾ ನಿವೃತ್ತ ಅಧಿಕಾರಿಯನ್ನು ಆಯುಕ್ತರನ್ನಾಗಿ ಮಾಡಲಾಗುತ್ತದೆ. ನೇಮಕಗೊಂಡ ಆಯುಕ್ತರು ದೂರುಗಳ ವಿಚಾರಣೆ, ಜಪ್ತಿ, ವಶಪಡಿಸಿಕೊಳ್ಳುವ ಪ್ರಕ್ರಿಯೆ ಸಂಪೂರ್ಣ ಮೇಲ್ವಿಚಾರಣೆ ಮಾಡುವ ಜೊತೆಗೆ ನಿಯಮಿತವಾಗಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ರೋಣ ಶಾಸಕ ಜಿ.ಎಸ್. ಪಾಟೀಲ, ಹೆಸ್ಕಾಂ ಅಧ್ಯಕ್ಷ ಸೈಯ್ಯದ ಅಜ್ಜಂಪೀರ ಖಾದ್ರಿ ಇದ್ದರು
ಈ ಅಧಿನಿಯಮವು ಕೇವಲ ಬಳ್ಳಾರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಅಕ್ರಮ ಗಣಿಗಾರಿಕೆ ಪ್ರಕರಣಗಳೂ ಇದರ ವ್ಯಾಪ್ತಿಗೆ ಬರಲಿವೆ. ಲೋಕಾಯುಕ್ತರು ಸುಮಾರು 12 ಸಾವಿರ ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂದು ಅಂದಾಜಿಸಿದ್ದಾರೆ. ನಮ್ಮ ಉಪಸಮಿತಿಯು 2013ರಿಂದ 2018ರವರೆಗಿನ ಅಕ್ರಮಗಳನ್ನು ಪರಿಶೀಲಿಸಿ, 1 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಅಂದಾಜಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಿನ ಮಾರುಕಟ್ಟೆ ಬೆಲೆ ಪರಿಗಣಿಸಿದರೆ 78 ಸಾವಿರ ಕೋಟಿ ರೂ. ಅಂದಾಜಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನಷ್ಟದ ಪ್ರಮಾಣ ಸ್ಪಷ್ಟವಾಗಲಿದೆ.
– ಎಚ್.ಕೆ. ಪಾಟೀಲ.
ಸಚಿವರು.