ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿಕ್ಷಕರಿಗೆಲ್ಲರಿಗೂ ಮಾದರಿಯಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ರು. ಒಬ್ಬ ಶಿಕ್ಷಕ ಹೇಗಿರಬೇಕು ಎಂಬುದನ್ನು ತೋರಿಸಿದವರು ಅವರು. ಅವರ ಆದರ್ಶಗಳನ್ನು ನಾವೂ ಸಹ ಅಳವಡಿಸಿಕೊಂಡು ಜೀವನದಲ್ಲಿ ನೆಮ್ಮದಿಯನ್ನು ಕಾಣೋಣ ಎಂದು ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತ್ರಿವೇಣಿ ಕಂಬಾಳಿಮಠ ಹೇಳಿದರು.
ಗದಗ ಪಟ್ಟಣದ ರೋಟರಿ ಸೆಂಟ್ರಲ್ನಲ್ಲಿ ಆಚರಿಸಲಾದ ಶಿಕ್ಷಕ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಒಬ್ಬ ಶಿಕ್ಷಕ ಒಂದು ಸಮರ್ಥ ಸಮಾಜವನ್ನು ನಿರ್ಮಾಣ ಮಾಡಬಲ್ಲ. ಮಕ್ಕಳು ಚಿಕ್ಕವರಿದ್ದಾಗಲೇ ನಾವು ನೀಡುವ ವಿದ್ಯೆ, ಸಂಸ್ಕಾರಗಳು ಅವನಲ್ಲಿ ಜೀವನಪರ್ಯಂತ ಮನೆ ಮಾಡಿರುತ್ತವೆ. ಹೀಗಾಗಿ ಶಿಕ್ಷಕರ ಜವಾಬ್ದಾರಿ ಬಹಳಷ್ಟಿದೆ ಎಂದರು.
ರೋಟರಿ ಸೆಂಟ್ರಲ್ನ ಅಧ್ಯಕ್ಷ ಚೇತನ ಅಂಗಡಿ ಮಾತನಾಡಿ, ಪ್ರತಿ ವರ್ಷ ನಮ್ಮ ಕ್ಲಬ್ನಲ್ಲಿ ನಾವು ಶಿಕ್ಷಕರನ್ನು ಗೌರವಿಸುವ ಕಾರ್ಯ ಮಾಡುತ್ತ ಬಂದಿದ್ದೇವೆ. ಸಮಾಜವನ್ನು ತಿದ್ದುವ, ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುವ ಶಿಕ್ಷಕರನ್ನು ಗೌರವಿಸುವುದು ನಮ್ಮ ಹೆಮ್ಮೆ. ಏಕೆಂದರೆ ನಾವೆಲ್ಲರೂ ಶಿಕ್ಷಕರಿಂದಲೇ ಸಮಾಜದಲ್ಲಿ ಈ ಸ್ಥಾನಮಾನಗಳನ್ನು ಗಳಿಸಿದ್ದೇವೆ ಎಂದರು.
ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ. ರಾಜಶೇಖರ ಉಮನಾಬಾದಿ, ಸೋಮೇಶ್ವರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಂ.ಬಿ. ರಮಾಣಿ, ಡಾ. ಎಲ್.ಎಸ್. ಗೌರಿ, ಡಾ. ಪ್ರಭು ಗಂಜಿಹಾಳ ಮುಂತಾದವರು ಪಾಲ್ಗೊಂಡಿದ್ದರು.



