ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅಲೆದಾಡಿಸುವುದು, ಸತಾಯಿಸುವುದು ಕಂಡು ಬಂದರೆ ಅಂಥಹವರ ಮೇಲೆ ಲೋಕಾಯುಕ್ತ ಕಾಯ್ದೆಯಂತೆ ಕ್ರಮ ಜರುಗಿಸಲಾಗುವುದು ಎಂದು ಗದಗ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ ಹೇಳಿದರು.
ಅವರು ಬುಧವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ಗದಗ ಲೋಕಾಯುಕ್ತ ಅಧಿಕಾರಿಗಳು ಆಯೋಜಿಸಿದ್ದ ಶಿರಹಟ್ಟಿ ತಾಲೂಕಾ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸಬೇಕು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ರಜೆ ಹೋಗಿ ಬಂದ ನಂತರವೂ ಸಹ ಮೆಡಿಕಲ್ ಚೆಕ್‌ಅಪ್ ಮಾಡಿಸಬೇಕು. ಈ ವಿಷಯವನ್ನು ಆರೋಗ್ಯ, ಶಿಕ್ಷಣ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಪೋಕ್ಸೊ ಕಾಯ್ದೆ ಗಂಭೀರ ಮತ್ತು ಅಪಾಯಕಾರಿಯಾಗಿದೆ. ಅಂಗನವಾಡಿ ಕೇಂದ್ರಗಳಲ್ಲೂ ಸಹ ಶುಚಿತ್ವ ಮತ್ತು ಆಹಾರದ ಗುಣಮಟ್ಟವನ್ನು ಕಾಪಾಡಬೇಕು. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಸಹಜ ಸ್ಥಿತಿಯತ್ತ ತರುವಂತಹ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿಗಳು ಸರಕಾರಿ ಶಾಲೆಗಳು, ವಸತಿ ಶಾಲೆಗಳಲ್ಲಿಯ ಅಡುಗೆ ಸಹಾಯಕಿಯರಿಗೆ ಅಗ್ನಿ ನಂದಿಸುವ ಕುರಿತು ಜಾಗೃತಿ ಮೂಡಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ ಸರಕಾರಿ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಸರಕಾರಿ ಶಾಲೆಗಳು ಉಳಿಯುವಂತೆ ಮಾಡಬೇಕು. ಇಲ್ಲದೇ ಹೋದರೆ ಖಾಸಗಿ ಶಾಲೆಗಳ ಡೊನೇಶನ್ ಹಾವಳಿ ಹೆಚ್ಚಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿಯೂ ಸಹ ಸಾರ್ವಜನಿಕರ ಆರೋಗ್ಯ ಕಾಪಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು. ಎಪಿಎಂಸಿ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬರುವ ಮಾರಾಟ ಮಳಿಗೆಗಳು ಯಾರಿಗೆ ಟೆಂಡರ್ ಆಗಿರುತ್ತವೆಯೋ ಅವರೇ ಉಪಯೋಗಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ಒಟ್ಟು 13 ದೂರುಗಳು ಸ್ವೀಕೃತವಾಗಿದ್ದು, ಇದರಲ್ಲಿ ಪಟ್ಟಣ ಪಂಚಾಯಿತಿ-4, ಪೊಲೀಸ್-1, ಹೆಸ್ಕಾಂ-1 ಹಾಗೂ ಇತರೆ-1 ಇಲಾಖೆಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ. ಇವುಗಳಲ್ಲಿ 6 ದೂರುಗಳಲ್ಲಿ ಲೋಕಾಯುಕ್ತರು ಫಾರ್ಮ್ 1 ಮತ್ತು 2ನ್ನು ನೀಲಾಗಿದೆ.
ತಹಸೀಲ್ದಾರ ರಾಘವೇಂದ್ರ ರಾವ್ ಕೆ, ತಾ.ಪಂ ಇಓ ಆರ್.ವಿ. ದೊಡ್ಡಮನಿ, ಲೋಕಾಯುಕ್ತ ಇನ್ಸ್ಪೆಕ್ಟರ್ ಎಸ್.ಎಸ್. ತೇಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ ಮಾತನಾಡಿ, ಸಾರ್ವಜನಿಕ ಅಹವಾಲು ಸಂದರ್ಭದಲ್ಲಿ ಗಂಭೀರ ಸ್ವರೂಪದ ದೂರುಗಳನ್ನು ದೂರುದಾರರಿಂದ ನೇರವಾಗಿ ಲೋಕಾಯುಕ್ತ ನಿಯಮಾನುಸಾರ ಫಾರ್ಮ್ 1 ಮತ್ತು 2ರ ಅರ್ಜಿಯನ್ನು ಸ್ವೀಕರಿಸಲಾಗುವುದು. ಈ ಫಾರ್ಮ್ಗಳು ನೇರವಾಗಿ ರಾಜ್ಯ ಲೋಕಾಯುಕ್ತರ ಬಳಿ ಅಲ್ಲಿಯ ಸೆಶೆನ್ ನ್ಯಾಯಾಧೀಶರಿಂದ ಅರ್ಜಿಯ ವಿಚಾರಣೆ ನಡೆಯುತ್ತದೆ. ಅಲ್ಲಿ ಸಂಬಂಧಿಸಿದ ಅರ್ಜಿದಾರರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ವಿಚಾರಣೆ ಮಾಡುತ್ತಾರೆ. ಆದ್ದರಿಂದ ಎಲ್ಲ ಇಲಾಖಾ ಅಧಿಕಾರಿಗಳು ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ತ್ವರಿತಗತಿಯಲ್ಲಿ ನಡೆಯುವಂತೆ ಎಚ್ಚರಿಕೆ ವಹಿಸುವುದು ಅವಶ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.



