ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಉತ್ತಮ ನಾಗರಿಕರನ್ನು ರೂಪಿಸುವಲ್ಲಿ, ಪಠ್ಯಪುಸ್ತಕಗಳನ್ನು ಮೀರಿದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಅಧ್ಯಕ್ಷರಾದ ಅಶ್ವಿನಿ ಜಗತಾಪ ಹೇಳಿದರು.
ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಮಾಸಿಕ ಸಭೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿ ಶ್ರೇಷ್ಠ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ನೀಡುವ ಜ್ಞಾನ ಉತ್ತಮ ಬದುಕನ್ನು ರೂಪಿಸುವುದಲ್ಲದೆ, ಒಳ್ಳೆಯ ದಾರಿಯನ್ನು ತೋರಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ಸುಧಾ ಬೆನಕಲ್ ಮಾತನಾಡಿ, “ಶಿಕ್ಷಕ ವೃತ್ತಿಯು ಶ್ರೇಷ್ಠವಾದ ವೃತ್ತಿ. ಶಿಕ್ಷಕರಾಗಿ ಕಾರ್ಯನಿರ್ವಹಿಸುವುದು ನಮ್ಮ ಸೌಭಾಗ್ಯ. ಇದಕ್ಕೆ ತಮ್ಮನ್ನು ಅಣಿ ಮಾಡಿದ ತಂದೆ-ತಾಯಿ ಹಾಗೂ ಗುರುತಿಸಿ ಸನ್ಮಾನಿಸಿದ ಕ್ಲಬ್ ಸದಸ್ಯರಿಗೆ ಎಲ್ಲ ಶಿಕ್ಷಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಶಿವಲೀಲಾ ಅಕ್ಕಿ ಮಾತನಾಡಿ, “ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಅಲ್ಲ, ಮಕ್ಕಳಲ್ಲಿ ಕರುಣೆ, ವಾತ್ಸಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತಾರೆ” ಎಂದರು.
ಸಿಪಿಸಿಸಿ ಮೀನಾಕ್ಷಿ ಕೊರವನವರು ಸನ್ಮಾನಿತರಾದ ಶಿಕ್ಷಕರನ್ನು ಪರಿಚಯಿಸಿದರು. ಮಾಜಿ ಅಧ್ಯಕ್ಷರಾದ ಶಾಂತಾ ಮುಂದಿನಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


