ವಿಜಯಸಾಕ್ಷಿ ಸುದ್ದಿ, ಗದಗ: “ಈ ನಾಡಿನೊಳಗೆ ಸಾವಿರಾರು ಅಂಧ–ಅನಾಥ ಬಡ ಮಕ್ಕಳು ಭಿಕ್ಷಾಪಾತ್ರೆ ಬಿಟ್ಟು, ಅಕ್ಷಯಪಾತ್ರೆ ಹಿಡಿದುಕೊಂಡು ಪ್ರಸಾದ ಸೇವಿಸುತ್ತಿದ್ದಾರೆ ಎಂದರೆ, ಅದಕ್ಕೆ ಮುಖ್ಯ ಕಾರಣ ಸಂಗೀತದ ಅಕ್ಷಯಪಾತ್ರೆ ನೀಡಿದ ಪಂ. ಪುಟ್ಟರಾಜ ಕವಿ ಗವಾಯಿಗಳು,” ಎಂದು ನೀಲಗುಂದ ಗುದ್ನೇಶ್ವರ ಶ್ರೀಮಠದ ಪೂಜ್ಯಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಯಳವತ್ತಿ ಗ್ರಾಮದಲ್ಲಿ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಗದಗ ಹಾಗೂ ಶ್ರೀಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ, ಯಳವತ್ತಿ ಇವರ ಸಹಯೋಗದಲ್ಲಿ ಪರಮಪೂಜ್ಯ, ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸೆ. 10ರಿಂದ 14ರವರೆಗೆ ಪ್ರತಿದಿನ ರಾತ್ರಿ 7 ಗಂಟೆಗೆ ಜರುಗುವ ‘ಮಹಾತ್ಮರ ಬದುಕು–ಬೆಳಕು’ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಯಳವತ್ತಿ ಗ್ರಾಮದಲ್ಲಿ ಪಂ. ಪುಟ್ಟರಾಜ ಶಿವಯೋಗಿಗಳ 15ನೇ ಪುಣ್ಯಸ್ಮರಣೆ ಮಾಡುತ್ತಿರುವುದು ಸಂತೋಷ ತಂದಿದೆ. ಈ ನಾಡಿನಲ್ಲಿ ಸಂಗೀತ ಜೀವಂತವಾಗಿದೆ ಎಂದರೆ ಅದರ ಹಿಂದೆ ಶ್ರೀಗುರು ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಶ್ರಮವಿದೆ. ಪೂರ್ತಿ ಜೀವನವನ್ನು ಸಮಾಜಕ್ಕಾಗಿ ಸಮರ್ಪಿಸಿದ ಉಭಯ ಗವಾಯಿಗಳು, ತಮ್ಮ ಜೀವನವನ್ನು ಗಂಧದ ಕೋರಡಿನಂತೆ ಸವೆಸಿದ್ದಾರೆ. ಅವರ ಸೇವೆ ಮಾಡಿ, ಗುರುವಿನ ಋಣಭಾರ ತೀರಿಸುವ ಭಾಗ್ಯವು ಯಳವತ್ತಿ ಗ್ರಾಮಸ್ಥರಿಗೆ ಒದಗಿ ಬಂದಿದೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯಳವತ್ತಿ ಗ್ರಾಮದ ಹಿರೇಮಠದ ಪೂಜ್ಯಶ್ರೀ ಸಿದ್ದಲಿಂಗಯ್ಯ ಸ್ವಾಮಿಗಳು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಚನಗೌಡ್ರ ಅಜ್ಜನಗೌಡ್ರ, ಸಮಿತಿಯ ಸದಸ್ಯರಾದ ಹೇಮಣ್ಣ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಈರಣ್ಣ ಹತ್ತಿಕಾಳ ನಿರೂಪಿಸಿ, ವಂದಿಸಿದರು. ಸಂಗೀತ ಬಾಗೇಶ ರಾಣಾಪೂರ, ತಬಲಾ ಸಾಥ್ ಸಿದ್ದೇಶಕುಮಾರ ಲಿಂಗನಬಂಡಿ ಅವರು ನೀಡಿದರು.
ಪ್ರವಚನಕಾರರಾದ ಶರಣ ಶಿವಲಿಂಗಯ್ಯ ಶಾಸ್ತ್ರಿಗಳು, ಸಿದ್ದಾಪೂರ, ಮಾತನಾಡಿ, “‘ಮಹಾತ್ಮರಂ ನೆನೆಯುವದೆ ಘನಮುಕ್ತಿ ಪದಂ ಶಿವಾಧವ’ ಅಂದರೆ, ಮಹಾತ್ಮರನ್ನು, ಶರಣರನ್ನು, ಸಂತರನ್ನು ಪ್ರತಿದಿನ ನೆನೆಯುವದೇ ನಮ್ಮ ಮನಸ್ಸಿನ ತಾಪ, ಕೋಪ, ಮಾಯೆ, ಒತ್ತಡ, ಮಲಿನತೆಗಳನ್ನು ದೂರ ಮಾಡಿ ಶಾಂತಿ, ನೆಮ್ಮದಿಯನ್ನು ನೀಡುತ್ತದೆ. ಯಳವತ್ತಿ ಗ್ರಾಮಸ್ಥರು ಪಂ. ಪುಟ್ಟರಾಜ ಕವಿ ಗವಾಯಿಗಳ ಬಗ್ಗೆ ಅಪಾರ ಭಕ್ತಿ, ಶ್ರದ್ಧೆ, ನಿಷ್ಠೆ ಹೊಂದಿದ್ದು, ಈ ಗ್ರಾಮದಲ್ಲಿ ಭಕ್ತಿಮಾರ್ಗದಲ್ಲಿ ಹೆಜ್ಜೆಯನ್ನು ಹಾಕುತ್ತಿದ್ದಾರೆ ಎಂದು ಹೇಳಿದರು.


