ರೈತರ ಮನೆ ಬಾಗಿಲಿಗೆ ಜಿಲ್ಲಾಡಳಿತ: ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸತತ 23 ದಿನಗಳಿಂದ ನಡೆದ ರೈತರ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ರೈತರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ನೈಜ್ಯ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ತಲೆತಲಾಂತರಗದ ರೈತರು ಅರಣ್ಯ ಜಮೀನುಗಳನ್ನು ಉಪಜೀವನಕ್ಕಾಗಿ ಸಾಗುವಳಿ ಮಾಡಿಕೊಂಡು ಬಗರ್‌ಹುಕುಂ ಕೃಷಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರ ನೀಡದೆ ಕಿರುಕುಳ ನೀಡುತ್ತಿದೆ. ನಾಗಾವಿ ಗ್ರಾಮದಲ್ಲಿ ಜಮೀನುಗಳನ್ನು ನಾಲ್ಕು ತಲೆಮಾರುಗಳಿಂದ ನೂರಾರು ಕುಟುಂಬಗಳು ಬಳಸಿಕೊಂಡು ಬಂದಿದ್ದರೂ ಯಾವುದೇ ಪರಿಹಾರ ನೀಡದೆ ಒಕ್ಕಲೆಬ್ಬಿಸಿರುವುದು ಖಂಡನೀಯ ಎಂದರು.

ರೈತರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಈ ಹೋರಾಟ ಇದೇ ಮೊದಲಲ್ಲ. ಹಿಂದೆಯೂ ನೀವು ಹೋರಾಟ ಮಾಡಿದಾಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ ಜಿಲ್ಲೆಯಲ್ಲಿ ಮೂರನೇ ಬಾರಿ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಎಡಿಸಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ವರದಿ ನೀಡಲು ಸೂಚಿಸಲಾಗಿತ್ತು, ಆದರೆ ವರದಿ ಇನ್ನೂ ಸಿಕ್ಕಿಲ್ಲ.

ಈಗ ಜಿಲ್ಲಾಧಿಕಾರಿಗಳು, ಎಡಿಸಿ, ಎಸಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮಿತಿಯು ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಹಾಗೂ ಹಕ್ಕುಪತ್ರ ಕುರಿತು ಅಕ್ಟೋಬರ್ 2ರೊಳಗೆ ವರದಿ ಸಲ್ಲಿಸಬೇಕು. ಬಳಿಕ ರೈತರೊಂದಿಗೆ ಸಭೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಸೂಚಿಸಿದರು.

ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ನೈಜ ಸಾಗುವಳಿದಾರರಿಗೆ ಹಕ್ಕುಪತ್ರ ದೊರಕುವವರೆಗೆ ಹೋರಾಟ ನಡೆಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು. ವಿಂಡ್ ಪವರ್ ಕಂಪನಿಗಳು ಜಿಲ್ಲೆಯಲ್ಲಿ ಜಮೀನು ಖರೀದಿಸುತ್ತಿದ್ದು, ಏಜೆಂಟರು ರೈತರಿಗೆ ಕಡಿಮೆ ಹಣ ನೀಡಿ ಮೋಸ ಮಾಡುವ ಘಟನೆಗಳು ನಡೆದಿವೆ. ಕೆಲವರಿಗೆ ಹೆಚ್ಚಾಗಿ ಹಣ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ರೈತರು ಜಾಗೃತರಾಗಿರಿ. ನಿಮ್ಮ ಜಮೀನಿನ ನಿಜವಾದ ಮೌಲ್ಯ ತಿಳಿಯಲು ಜಿಲ್ಲಾಧಿಕಾರಿಗಳ ಬಳಿ ಹೋಗಿ, ಮೋಸಕ್ಕೆ ಒಳಗಾಗಬೇಡಿ ಎಂದು ಸಚಿವರು ಎಚ್ಚರಿಕೆ ನೀಡಿದರು.

ಈ ವೇಳೆ ಡಿಸಿ ಸಿ.ಎನ್. ಶ್ರೀಧರ್, ಎಸ್‌ಪಿ ರೋಹನ್ ಜಗದೀಶ, ಸಿದ್ದು ಪಾಟೀಲ, ಅಪ್ಪಣ್ಣ ಇನಾಮತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬರ್ಚಿ, ಬಿ.ಎಸ್. ಚಿಂಚಲಿ, ಪ್ರೊ. ಎನ್.ಟಿ. ಪೂಜಾರ, ಸುರೇಶ ಮಹಾರಾಜ, ಫಿರೋಜ್ ನದಾಫ್, ಚಂಬಣ್ಣ ಚನ್ನಪಟ್ಟಣ, ನಾಮದೇವ ಸೇರಿದಂತೆ ಹೋರಾಟಗಾರರು ಉಪಸ್ಥಿತರಿದ್ದರು.

ರೈತರಿಗೆ ಉಚಿತ ಆರೋಗ್ಯ ತಪಾಸಣೆ

23 ದಿನಗಳಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು ಮತ್ತು ಮಹಿಳೆಯರಿಗೆ ಬುಧವಾರ ಸಚಿವರ ಭೇಟಿಯ ನಂತರ ಡಿಜಿಎಮ್ ಆಯುರ್ವೇದಿಕ್ ಕಾಲೇಜಿನ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ಮಾನ್ಯ ಸಚಿವ ಎಚ್.ಕೆ. ಪಾಟೀಲರು ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದು ಸಂತೋಷದ ವಿಷಯ. ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಗಳು, ಎಸಿ ಮತ್ತು ಎಡಿಸಿ ಸಮಿತಿ ರಚಿಸಿ ವರದಿ ತಯಾರಿಸಿ ನೈಜ ಸಾಗುವಳಿದಾರರಿಗೆ ನ್ಯಾಯ ಒದಗಿಸಿಕೊಡಲಿ.

– ರವಿಕಾಂತ ಅಂಗಡಿ.

ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಮಹಾಸಭಾ.


Spread the love

LEAVE A REPLY

Please enter your comment!
Please enter your name here