ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತ ರಾಜ್ಯದಲ್ಲಿ `ಒಡೆದು ಆಳುವ ನೀತಿ’ ಅನುಸರಿಸುತ್ತಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮರು ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ, ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಅಡ್ಡಿಪಡಿಸಲಾಗುತ್ತಿದೆ. ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಾಟದ ಘಟನೆ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಎಸ್‌ಸಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸಿತ್ತು. ಆದರೆ, ಕಾಂಗ್ರೆಸ್ ಶಾಸಕರು ಸದನದಲ್ಲಿ ಈ ಬಗ್ಗೆ ಸುಳ್ಳು ಹೇಳಿದ್ದರು. ಈಗ ಶೇ. 17ರಷ್ಟು ಮೀಸಲಾತಿಯನ್ನು ವಿಂಗಡಿಸಿ, ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಹಾಗಿದ್ದರೆ ಈ ಶೇ. 17ರ ಮೀಸಲಾತಿ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.
ಆದಿ ಆಂಧ್ರ ಜನಾಂಗವನ್ನು ಮೂಲ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದ ಕಾರಜೋಳ, ಈಗಾಗಲೇ ನಡೆದಿರುವ ನಾಗಮೋಹನದಾಸ್ ಮತ್ತು ಮಾಧುಸ್ವಾಮಿ ವರದಿಗಳು ವೈಜ್ಞಾನಿಕವಾಗಿವೆ. ಆದರೂ, ಜಿ. ಪರಮೇಶ್ವರ, ಶಿವರಾಜ ತಂಗಡಗಿ ಮತ್ತು ಮಹದೇವಪ್ಪ ಅವರು ಯಾವ ಸಮುದಾಯಕ್ಕೂ ಪ್ರಯೋಜನವಿಲ್ಲದ ರೀತಿಯಲ್ಲಿ ಒಳಮೀಸಲಾತಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಕ್ಕೆ ಈಗಲೂ ಈ ವರದಿಯನ್ನು ತಿದ್ದುಪಡಿ ಮಾಡಲು ಅವಕಾಶವಿದ್ದು, ತಿದ್ದುಪಡಿಗೆ ಮುಂದಾಗದಿದ್ದರೆ ಹೋರಾಟ ನಡೆಸುತ್ತೇವೆ. ಈಗಾಗಲೇ ವೈಜ್ಞಾನಿಕ ರೀತಿಯಲ್ಲಿ ಜಾತಿ ಗಣತಿ ಆಗಿದೆ. ಮತ್ತೊಮ್ಮೆ ಗಣತಿ ಮಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಂಜುನಾಥ ಮುಳಗುಂದ, ಉಷಾ ದಾಸರ, ಎಂ.ಎಂ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ಆದರೆ, ಜನರ ಮೇಲೆ ತೆರಿಗೆ ಮತ್ತು ದರಗಳ ಹೊರೆ ಹೆಚ್ಚಿಸಲಾಗಿದೆ. ಮದ್ಯದ ದರ ಶೇ. 400ರಷ್ಟು ಏರಿಕೆಯಾಗಿದ್ದು, ಮನೆ, ನೀರು ಮತ್ತು ವಿದ್ಯುತ್ ದರಗಳೂ ಹೆಚ್ಚಾಗಿವೆ. ಇದಲ್ಲದೆ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 38 ಸಾವಿರ ಕೋಟಿ ರೂ. ಹಣವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.


