ಇತರರು ಹೇಳಿದಂತೆ ಜಾತಿ ನಮೂದಿಸದಿರಿ: ವಚನಾನಂದ ಸ್ವಾಮೀಜಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ, ಜಾತಿ ಕಾಲಂನಲ್ಲಿ ಪಂಚಮಸಾಲಿ ಸಮುದಾಯ ಏನು ನಮೂದಿಸಬೇಕು ಎನ್ನುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಸಿದ್ಧತೆ ನಡೆದಿದೆ. ಹೀಗಾಗಿ ಯಾವುದೇ ಮಹಾಸಭೆಯ ನಿರ್ಣಯಕ್ಕೂ ಪಂಚಮಸಾಲಿ ಸಮಾಜದ ನಿರ್ಣಯಕ್ಕೂ ಸಂಬಂಧವಿಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.

Advertisement

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 17ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಚರ್ಚಿಸಿ, ಜಾತಿ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಪಂಚಮಸಾಲಿಗಳು ಇತರ ಸಂಸ್ಥೆಗಳು ಹೇಳಿದಂತೆ ಜಾತಿ ನಮೂದಿಸಬಾರದು ಎಂದು ಹೇಳಿದರು.

ಇತ್ತೀಚೆಗೆ ಹಿಂದುಳಿದ ವರ್ಗಗಳ ಇಲಾಖೆಯು 1,572 ಜಾತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಈ ಮೊದಲು ಇದ್ದ ಪಂಚಮಸಾಲಿ ಲಿಂಗಾಯತ ಮತ್ತು ವೀರಶೈವ ಪಂಚಮಸಾಲಿ ಜೊತೆಗೆ ಹೊಸದಾಗಿ ಜೈನ್ ಪಂಚಮಸಾಲಿ ಜಾತಿಯನ್ನು ಸೇರಿಸಲಾಗಿದೆ. ಇದು ಪಂಚಮಸಾಲಿ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ಸರ್ಕಾರದ ಪ್ರಯತ್ನ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು. ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯದ ಜನಸಂಖ್ಯೆ ಅಧಿಕವಾಗಿದ್ದು, ಈ ಬಗ್ಗೆ ಪಂಚಮಸಾಲಿ ಸಂಘವೇ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದರು.

ಸಾಮಾಜಿಕ ಸಮೀಕ್ಷೆಯಲ್ಲಿ ಹೊಸದಾಗಿ ನಾಸ್ತಿಕ ಮತ್ತು ತಿಳಿಸಲು ನಿರಾಕರಿಸುತ್ತಾರೆ ಎಂಬ ಕಾಲಂಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಇವುಗಳನ್ನು ಕೂಡಲೇ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಸ್ವಾಗತಿಸಿದ ವಚನಾನಂದ ಶ್ರೀಗಳು, ಬಸವತತ್ವಗಳು ಸಮಾಜದಲ್ಲಿ ಹರಡಬೇಕು ಎಂದರು. ಕೆಲವು ಸ್ವಾಮೀಜಿಗಳು ನಾಸ್ತಿಕರಂತೆ ವರ್ತಿಸುತ್ತಿದ್ದಾರೆ. ಬಸವ ಅಭಿಯಾನದಲ್ಲಿ ಲಕ್ಷ್ಮಿ ಮತ್ತು ಗಣೇಶನನ್ನು ನಿಂದಿಸುವ ಕೃತ್ಯಗಳನ್ನು ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here