ಕೆಲ ತಿಂಗಳ ಹಿಂದೆ ನಡೆದ ವಿವಾದದ ಮೂಲಕ ಸುದ್ದಿಯಾಗಿದ್ದ ನಟ ಮಡೆನೂರು ಮನು ಮತ್ತೆ ಸಿನಿಮಾದ ಕೆಲಸಗಳಿಗೆ ಮರಳಿದ್ದಾರೆ. ವಿವಾದದ ಕಹಿ ಘಟನೆಯನ್ನು ಮರೆತು ಮನು ಮತ್ತೊಂದು ಹೊಸ ಸಿನಿಮಾದ ಕೆಲಸವನ್ನು ಆರಂಭಿಸಿದ್ದಾರೆ.
ಇತ್ತೀಚೆಗೆ ಮಡೆನೂರು ಮನು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಹೊಸ ಚಿತ್ರವೊಂದು ಘೋಷಣೆಯಾಯಿತು. ಈ ಚಿತ್ರಕ್ಕೆ ‘ಮುತ್ತರಸ’ ಎಂಬ ಶೀರ್ಷಿಕೆ ಇಡಲಾಗಿದೆ. ಇದೀಗ ಈ ಸಿನಿಮಾದ ಕೆಲಸದಲ್ಲಿ ಮನು ತೊಡಗಿಕೊಂಡಿದ್ದಾರೆ.
‘ಮುತ್ತರಸ’ ಸಿನಿಮಾ ‘ಜೆ.ಕೆ. ಮೂವೀಸ್’ ಮೂಲಕ ಕೆ.ಎಂ. ನಟರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಸಿಷ್ಠ ಸಿಂಹ, ಎಂ.ಎಸ್. ಉಮೇಶ್, ಕರಿಸುಬ್ಬು, ಉಮೇಶ್ ಬಣಕಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದು, ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಟೈಟಲ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇನ್ನೂ ಈ ಬಗ್ಗೆ ಮಾತನಾಡಿದ ಮನು, “ಕೆಲವು ದಿನಗಳ ಹಿಂದೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಈಗ ಮರೆತಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ಆಗ ನನ್ನ ಜೊತೆಗೆ ನಿಂತ ಎಲ್ಲರಿಗೂ ನಾನು ಚಿರಋಣಿ. ಇಂದು ನನ್ನ ಹೊಸ ಸಿನಿಮಾ ‘ಮುತ್ತರಸ’ ಶೀರ್ಷಿಕೆ ಬಿಡುಗಡೆ ಆಗಿದೆ. ವಸಿಷ್ಠ ಸಿಂಹ ಹಾಗೂ ಎಲ್ಲ ಗಣ್ಯರಿಗೆ ಧನ್ಯವಾದಗಳು ಎಂದರು.
ಇದೇ ವೇಳೆ ಮಾತನಾಡಿದ ಮನು, “‘ತಲ್ವಾರ್ ಪೇಟೆ’ ಚಿತ್ರದ ಮೂಲಕ ವಸಿಷ್ಠ ಸಿಂಹ ಅವರ ಜೊತೆಗೆ ನಾನು ಮೊದಲಿಗೆ ನಟಿಸಿದ್ದೆ. ಈಗ ‘ಮುತ್ತರಸ’ ಶೀರ್ಷಿಕೆಯನ್ನು ನಿರ್ದೇಶಕ ರಾಮ್ ನಾರಾಯಣ್ ನೀಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ,” ಎಂದು ತಿಳಿಸಿದರು.