ಬೆಂಗಳೂರು:- ಆನೆ ವಿಹಾರಧಾಮ ಸ್ಥಾಪನೆ ಕುರಿತು ಸ್ಥಳೀಯರ ಜೊತೆ ಚರ್ಚಿಸಲಾಗತ್ತೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಆನೆ ವಿಹಾರಧಾಮ ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಚಿಕ್ಕಮಗಳೂರಿನ ಮುತ್ತೋಡಿಗಿಂತಲೂ ತಣಿಗೆಬೈಲು ಸೂಕ್ತ ಪ್ರದೇಶ ಎಂದು ತಜ್ಞರು ವರದಿ ನೀಡಿದ್ದು, ಈ ಕುರಿತಂತೆ ಸ್ಥಳೀಯರ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಆನೆಗಳ ಸಮಸ್ಯೆ ಯಾವ ವಲಯದಲ್ಲಿ ಹೆಚ್ಚಾಗಿದೆ. ಆನೆಗಳ ದಾಳಿ ನಡೆಯುತ್ತಿರುವ ಸಮಯ, ಕಾರಣ ಕುರಿತಂತೆ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಬೇಕು. ಆನೆ ಧಾಮ ಬಹುಪಾಲು ಆನೆ-ಮಾನವ ಸಂಘರ್ಷ ತಗ್ಗಿಸುವ ಭರವಸೆ ಇದೆ. ಮುಂದಿನ ವಾರ ತಾವು ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರನ್ನು ಭೇಟಿ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಆನೆ ವಿಹಾರಧಾಮ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಗುವುದು. ಕಾಂಪಾದಿಂದ ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.


