ಹಾಸನ:– ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಶುಕ್ರವಾರ ಸಂಭವಿಸಿದ ಟ್ರಕ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಹಾಸನ ತಾಲ್ಲೂಕಿನ ಶಿವಯ್ಯನ ಕೊಪ್ಪಲು ಗ್ರಾಮದ ಯುವಕ 26 ವರ್ಷದ ಚಂದನ್ ಗಂಭೀರ ಸ್ಥಿತಿಯಲ್ಲಿ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ದುರಾದೃಷ್ಟವಶಾತ್ ಟ್ರಕ್ ಹರಿದಿದ್ದರಿಂದ ಚಂದನ್ ಬ್ರೇನ್ ಡೆಡ್ ಸ್ಥಿತಿಯಲ್ಲಿತ್ತು. ಹೀಗಾಗಿ ಚಂದನ್ ನನ್ನು ಬದುಕಿ ಉಳಿಸುವ ವೈದ್ಯರ ಪ್ರಯತ್ನಗಳೆಲ್ಲಾ ವಿಫಲವಾದವು. ಇಂದು(ಶನಿವಾರ) ಸಂಜೆ ಚಂದನ್ ಮೃತಪಟ್ಟಿದ್ದಾನೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
ಚಂದನ್, ಶಿವಯ್ಯನ ಕೊಪ್ಪಲು ಗ್ರಾಮದ ಚಂದ್ರಶೇಖರ್ ಮತ್ತು ಮಂಜುಳಾ ದಂಪತಿಯ ಏಕೈಕ ಪುತ್ರ. ಊರಿನಲ್ಲಿ ಕೃಷಿ ಮಾಡಿಕೊಂಡು, ಟ್ರಾಕ್ಟರ್ ಓಡಿಸಿಕೊಂಡು ಚಂದನ್ ಜೀವನ ಸಾಗಿಸುತ್ತಿದ್ದ. ತಂದೆ, ತಾಯಿಗೆ ಆಸರೆಯಾಗಿದ್ದ ಏಕೈಕ ಮಗನೂ ಈಗ ಇಲ್ಲವಾಗಿದ್ದಾನೆ. ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


