ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ಸಿದ್ದಾರೂಢ ಮಠದಿಂದ ಪಿಎಲ್‌ಡಿ ಬ್ಯಾಂಕ್‌ವರೆಗೆ ಹಾಗೂ ಗದಗ ರಸ್ತೆಯ ಎಂಆರ್‌ಬಿಸಿ ಕಾಲುವೆಯಿಂದ ಹೊಳೆಆಲೂರ ಕ್ರಾಸ್‌ವರೆಗೆ ಸಿಸಿ ರಸ್ತೆಯ ನಿರ್ಮಾಣ ಹಾಗೂ ಆಕರ್ಷಕ ದೀಪಗಳ ಅಳವಡಿಕೆ, ಪುಟ್‌ಪಾತ್ ನಿರ್ಮಾಣ ಸೇರಿ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಗ್ರಿಲ್ ಅಳವಡಿಕೆ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಇಂದಿನಿಂದಲೇ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ₹1 ಕೋಟಿ 75 ಲಕ್ಷ ರೂ ವೆಚ್ಚದಲ್ಲಿ ಸಿದ್ದಾರೂಢ ಮಠದಿಂದ ಪಿಎಲ್‌ಡಿ ಬ್ಯಾಂಕ್‌ವರೆಗೆ ಮತ್ತು ₹2 ಕೋಟಿ ರೂಗಳ ವೆಚ್ಚದ ಎಂಆರ್‌ಬಿಸಿ ಕಾಲುವೆಯಿಂದ ಮುಲ್ಲಾನಭಾವಿ ಕ್ರಾಸ್‌ವರೆಗೆ ಸಿಸಿ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ರೈತರ ಹಿತದೃಷ್ಟಿಯಿಂದ ₹6 ಕೋಟಿ ರೂ ವೆಚ್ಚದಲ್ಲಿ 1500 ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ₹20 ಕೋಟಿ ರೂಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಪಾದಚಾರಿಗಳ ಸುರಕ್ಷತಾ ದೃಷ್ಟಿಯಿಂದ ಗ್ರಿಲ್ ಅಳವಡಿಕೆ ಕಾಮಗಾರಿಯನ್ನು ಹೊಸದಾಗಿ ಅಳವಡಿಸಿಕೊಳ್ಳಲಾಗಿದೆ. ಪಟ್ಟಣದ 23 ವಾರ್ಡ್ಗಳ ಅಭಿವೃದ್ಧಿಗೆ ₹4 ಕೋಟಿ 87 ಲಕ್ಷ ರೂಗಳನ್ನು ಒದಗಿಸಲಾಗಿದೆ ಎಂದರು.
ಜಿಗಳೂರ ಕೆರೆಯಿಂದ ರೋಣ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ₹20 ಕೋಟಿ ರೂ ಅನುದಾನದಲ್ಲಿ ಕಾಮಗಾರಿ ನಡೆದಿದೆ. ಈ ಯೋಜನೆಯಿಂದ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಅಲ್ಲದೆ ₹75 ಲಕ್ಷ ರೂಗಳ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗುತ್ತಿದೆ. ನವಲಗುಂದದ ಕಾತ್ರಾಳ್ ಕ್ರಾಸ್‌ವರೆಗಿನ ಹೈವೇ ಸಹ ನಿರ್ಮಾಣವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಬಸ್ಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತಪ್ಪ ತಳ್ಳಿಕೇರಿ, ವೀರಣ್ಣ ಶೆಟ್ಟರ, ವಿ.ಆರ್. ಗುಡಿಸಾಗರ, ದಶರಥ ಗಾಣಿಗೇರ, ಮುತ್ತಣ್ಣ ಸಂಗಳದ, ಯೂಸುಫ್ ಇಟಗಿ, ಬಾವಾಸಾಬ್ ಬೆಟಗೇರಿ, ಪರಶುರಾಮ ಅಳಗವಾಡಿ, ಎಚ್.ಎಸ್. ಸೋಂಪುರ, ಚೆನ್ನಪ್ಪಗೌಡ ರಾಯನಗೌಡ್ರ, ಆನಂದ ಚಂಗಳಿ, ಪ್ರಕಾಶ ಹಾಲಣ್ಣವರ, ಸಂಗು ನವಲಗುಂದ, ಸಂಜಯ ದೊಡ್ಡಮನಿ, ಅಸ್ಲಾಂ ಕೊಪ್ಪಳ ಸೇರಿದಂತೆ ಪುರಸಭೆಯ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಪಟ್ಟಣದ ಮಧ್ಯ ಭಾಗದಲ್ಲಿರುವ ಕೆರೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ವಾಯುವಿಹಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸುಸಜ್ಜಿತ ರಸ್ತೆ ನಿರ್ಮಾಣ, ಆಸನಗಳ ವ್ಯವಸ್ಥೆ, ಉದ್ಯಾನವನ ನಿರ್ಮಾಣ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಮುಖ್ಯವಾಗಿ ಕೆರೆಯನ್ನು ತುಂಬಿಸುವ ಮೂಲಕ ಬೋಟಿಂಗ್ ವ್ಯವಸ್ಥೆಯನ್ನು ಕಾಮಗಾರಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ₹40 ಲಕ್ಷ ರೂಗಳ ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.



