ನವದೆಹಲಿ: ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮೊದಲು ಆಡಿರುವ 13 ಟಿ20ಐ ಪಂದ್ಯಗಳಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ. ದುಬೈ ಮೈದಾನದಲ್ಲಿ ಎರಡೂ ತಂಡಗಳು ನಾಲ್ಕನೇ ಬಾರಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇನ್ನೂ ಭಾರತ ಮತ್ತು ಪಾಕಿಸ್ತಾನ ಪಂದ್ಯಾವಳಿಯ ಕುರಿತು ಮಾತನಾಡಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ‘ಎಸಿಸಿ ಅಥವಾ ಐಸಿಸಿ ಬಹುರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಿದಾಗ, ರಾಷ್ಟ್ರಗಳು ಭಾಗವಹಿಸುವುದು ಕಡ್ಡಾಯವಾಗುತ್ತದೆ. ಒಂದು ವೇಳೆ ನಮ್ಮ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೆ, ಪಂದ್ಯಾವಳಿಯಿಂದ ಹೊರಗುಳಿಯಬೇಕಾಗುತ್ತದೆ.
ಇದರಿಂದಾಗಿ ಇತರ ತಂಡವು ಅಂಕಗಳನ್ನು ಪಡೆಯುತ್ತದೆ ಹೀಗಾಗಿ ಈ ಪಂದ್ಯಾವಳಿಯಲ್ಲಿ ನಮ್ಮ ತಂಡ ಆಡಬೇಕಾಗಿದೆ. ಆದರೆ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಾವಳಿಗಳನ್ನು ಆಡುವುದಿಲ್ಲ. ಪಾಕಿಸ್ತಾನ ಭಾರತದ ಮೇಲಿನ ಭಯೋತ್ಪಾದಕ ದಾಳಿಯನ್ನು ನಿಲ್ಲಿಸುವವರೆಗೆ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಾವಳಿಗಳನ್ನು ಆಡುವುದಿಲ್ಲ ಎಂದು ನಾವು ಬಹಳ ಹಿಂದೆಯೇ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.