ಕನ್ನಡ ಚಿತ್ರರಂಗದ ಖ್ಯಾತ ದಂಪತಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರಗೆ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿರೋ ಕಿಡಿಗೇಡಿಗಳು ಪ್ರಿಯಾಂಕ ಉಪೇಂದ್ರ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು ಈ ಬಗ್ಗೆ ಎಚ್ಚರಿಕೆ ಇಂದಿರುವಂತೆ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಪ್ರಿಯಾಂಕ ಮೊಬೈಲ್ ಹ್ಯಾಕ್ ಮಾಡಿದ ಕಿಡಿಗೇಡಿ ಅವರ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಹಣ ನೀಡುವಂತೆ ಮೆಸೇಜ್ ಮಾಡಿದ್ದಾನೆ. ಎಮರ್ಜೆನ್ಸಿ ಇದೆ, ಹಣ ನೀಡಿ ಎಂದು ಪ್ರಿಯಾಂಕ ಉಪೇಂದ್ರ ನಂಬರ್ ನಿಂದ ಮೆಸೇಜ್ ಹೋಗಿದೆ. ಪ್ರಿಯಾಂಕ ಮೊಬೈಲ್ ನಿಂದ ಬಂದ ಮೆಸೇಜ್ ನೋಡಿದ ಸ್ನೇಹಿತರು ಅವರ ಮೊಬೈಲ್ ಗೆ ಲಕ್ಷಾಂತರ ರೂಪಾಯಿವರೆಗೂ ಹಣ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ. ಪುತ್ರನಿಂದಲೂ ಯುಪಿಐ ಮೂಲಕ 55 ಸಾವಿರ ಕಳುಹಿಸಲಾಗಿದೆಯಂತೆ. ಈಗ ಪ್ರಿಯಾಂಕಾ ಅವರು ಸದ್ಯ ಸದಾಶಿವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ ಉಪೇಂದ್ರ, ನಮ್ಮ ಮನೆಗೆ ಫರ್ನೀಚರ್ ಬರಬೇಕಿತ್ತು. ಎರಡು ಫರ್ನೀಚರ್ ಬಾಕಿ ಇತ್ತು. ಬೆಳಗ್ಗೆ ಅಪರಿಚಿತ ನಂಬರ್ ನಿಂದ ಕರೆ ಬಂತು. ಡಿಲಿವರಿ ಕೋಡ್ ಬರುತ್ತೆ ಅದನ್ನ ಹೇಳಲು ಹೇಳಿದ್ದರು. ನಾನು ನಿಜವೆಂದು ತಿಳಿದು ಹೇಳಿದೆ. ಹೇಳಿದ ತಕ್ಷಣ ನನ್ನ ಮೊಬೈಲ್ ಹ್ಯಾಂಗ್ ಅಗೋಕೆ ಶುರು ಆಯ್ತು ಬಳಿಕ ಮೊಬೈಲ್ ವರ್ಕ್ ಆಗಲಿಲ್ಲ. ಇದಾದ ಬಳಿಕ ಎಲ್ಲರಿಗೂ ಹಣ ಕಳಿಸುವಂತೆ ಮೆಸೇಜ್ ಹೋಗಿದೆ. ದಯವಿಟ್ಟು ಯಾರು ಹಣವನ್ನ ಕಳುಹಿಸಬೇಡಿ. ನನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಪ್ರಿಯಾಂಕಾ ಮನವಿ ಮಾಡಿದ್ದಾರೆ.