ವಿಜಯಸಾಕ್ಷಿ ಸುದ್ದಿ, ಗದಗ: ಶಿಸ್ತುಬದ್ಧ ಜೀವನ ಹಾಗೂ ಸಮಯ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಬದುಕು ನಮಗೆಲ್ಲಾ ಮಾರ್ಗದರ್ಶಿಯಾಗಿದೆ ಎಂದು ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್, ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಯೋಗದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಕಂಡ ಪ್ರತಿಯೊಂದು ಕನಸುಗಳು ನಾಡಿನ ಕನಸಾಗಿದ್ದವು. ಆ ಕನಸುಗಳನ್ನು ನನಸು ಮಾಡುವುದಕ್ಕೆ ಅವಿರತವಾಗಿ ಪ್ರಯತ್ನಿಸಿದರು. ಅವರ ಸಾಧನೆಯ ವ್ಯಾಪ್ತಿಯನ್ನು ನೋಡಿದರೆ ಅವರನ್ನು ಕೇವಲ ಇಂಜಿನಿಯರ್ ಎಂದು ಕರೆಯುವುದು ತಪ್ಪಾಗುತ್ತದೆ, ಅವರೊಬ್ಬ ಮುತ್ಸದ್ಧಿಯಾಗಿದ್ದರು. ಅದರ ಪರಿಣಾಮವೇ ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ನೀರಾವರಿ, ಕಲೆ, ಸಾಹಿತ್ಯ, ನಾಡು-ನುಡಿ, ಇತ್ಯಾದಿಗಳ ಬಗ್ಗೆ ಕಳಕಳಿ ಹೊಂದಿದ್ದರು ಎಂದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕನ್ನಂಬಾಡಿ ಕಟ್ಟೆ ಮತ್ತು ಅದಕ್ಕೆ ಅಳವಡಿಸಿರುವ ಸ್ವಯಂಚಾಲಿತ ಗೇಟುಗಳು, ಭದ್ರಾವತಿಯ ಉಕ್ಕು, ಕಬ್ಬಿಣ ಹಾಗೂ ಪೇಪರ್ ಕಾರ್ಖಾನೆಗಳು, ಶರಾವತಿ ಜಲ ವಿದ್ಯುತ್ ಯೋಜನೆ ಇವೆಲ್ಲ ಅವರ ಪ್ರತಿಭೆಗೆ ಸಾಕ್ಷಿಯಾಗಿವೆ. ಹಳೆಯ ಮೈಸೂರು ಭಾಗವು ಹಚ್ಚ ಹಸಿರಿನಿಂದ ಕೂಡಿದೆ ಎಂದರೆ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಪ್ರಮುಖವಾಗಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಎಸ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆಂಜನೇಯ ಕಟಗಿ ಮಾತನಾಡಿದರು. ಯುವ ಮುಖಂಡ ಮಿಥುನ ಪಾಟೀಲ, ಉಮೇಶ್ ನಾಯಕ, ರಾಘವೇಂದ್ರ ಪುರೋಹಿತ, ಚಂದ್ರಶೇಖರ ನಗಲಕೇರ್, ಗುರುನಾಥ, ಆರ್.ಕೆ. ಮಠದ, ಅಶೋಕ ಕಣವಿ, ಎಸ್.ಕೆ. ಪಾಟೀಲ, ವಿಜಯ ಮುಲ್ಕಿಪಾಟೀಲ, ಆರ್.ಡಿ. ರಂಗಪ್ಪನವರ, ಎಸ್.ಕೆ. ಪಾಟೀಲ, ವಿ.ಜಿ. ಮುಲ್ಕಪಾಟೀಲ, ಆರ್.ಡಿ. ರಂಗಪ್ಪನವರ, ಬಿ.ಐ. ಶಿರಗುಂಪಿ, ಸುರೇಶ ತಿರ್ಲಾಪೂರ, ಬಿ.ಎಸ್. ಮೇಟಿ, ಎ.ಎಚ್. ಪಾಟೀಲ, ಬಿ.ಆರ್. ಹೊಸಮನಿ, ಬಸವರಡ್ಡಿ ಹಂಚಿನಾಳ ಸೇರಿದಂತೆ ಇತರರು ಇದ್ದರು.
ಆಧುನಿಕ ಕಾಲದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಹೊಸ ಹೊಸ ಬದಲಾವಣೆಗಳನ್ನು ಇಂದಿನ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಅಳವಡಿಸಿಕೊಂಡು ಹೋಗಬೇಕು. ಅಂದಾಗ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಭಾಗದ ಸಂಸದರು, ಶಾಸಕರು ಸೇರಿಕೊಂಡು ಗುತ್ತಿಗೆದಾರರಿಗೆ ಆಗುತ್ತಿರುವ ಸಮಸ್ಯೆ ಪರಿಹಾರ ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತದೆ.