ವಿಜಯಸಾಕ್ಷಿ ಸುದ್ದಿ, ಗದಗ:: ಪ್ರತಿಯೊಂದು ಮಗುವಿಗೂ ಸುಂದರವಾದ ಜೀವನ ಅವಶ್ಯಕ. ಕೆಲವು ಮಕ್ಕಳು ಕೆಲವು ನ್ಯೂನತೆಗಳ ಕಾರಣದಿಂದ ದಿವ್ಯಾಂಗ ಮಕ್ಕಳು ಎಂದು ಗುರುತಿಸಿಕೊಳ್ಳುತ್ತಾರೆ. ಅವರ ವಯಸ್ಸು ಮತ್ತು ನ್ಯೂನತೆಗಳ ಅನುಗುಣವಾಗಿ ಅವರಿಗೆ ಸೂಕ್ತವಾದ ಚಿಕಿತ್ಸೆ ಹಾಗೂ ಮಾರ್ಗದರ್ಶನ ದೊರೆಯುವುದು ಅವಶ್ಯಕ ಎಂದು ಗದಗ ಶಹರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಪೆಪ್ಪನವರ ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ದತ್ತು ಶಾಲೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿವ್ಯಾಂಗ ಮಕ್ಕಳಿಗೆ ಸಿಗಬಹುದಾದ ಸವಲತ್ತುಗಳ ಬಗ್ಗೆ ವಿವರಿಸಿ, ಇಂತಹ ಮಕ್ಕಳ ಚಿಕಿತ್ಸೆಗಾಗಿ ನಮ್ಮ ಕರ್ನಾಟಕದಲ್ಲಿರುವ ವಿಶೇಷ ವೈದ್ಯಕೀಯ ಆಸ್ಪತ್ರೆಗಳು ಮತ್ತು ಅದರ ಮಾಹಿತಿಯನ್ನು ನೀಡಿದರು.
ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಅಧ್ಯಕ್ಷೆ ಅಶ್ವಿನಿ ಜಗತಾಪ್ ಮಾತನಾಡಿ, ವಿಶೇಷ ಮಕ್ಕಳು ಸಾಮಾನ್ಯರಂತೆ ಬದುಕನ್ನು ನಡೆಸುವಲ್ಲಿ ನಮ್ಮಿಂದ ಆಗಬಹುದಾದ ಸಹಾಯ ಮಾಡೋಣ ಎಂದರು.
ಕ್ಲಬ್‌ನ ಹಿರಿಯರಾದ ರಾಜೇಶ್ವರಿ ಬಳ್ಳಾರಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ವಿಶೇಷವಾಗಿರುವ ಶೈಕ್ಷಣಿಕ ಕಾರ್ಯಗಳಲ್ಲಿ ಶಾಲೆಗಳನ್ನು ದತ್ತು ಪಡೆದು ಅವುಗಳಲ್ಲಿ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಪೂರೈಸುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಕೈಗೊಂಡ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸಿಪಿಸಿಸಿ ಮೀನಾಕ್ಷಿ ಕೊರವನವರ ಮಾತನಾಡಿ, ‘ದಿಶಾ ಐಐಎಲ್‌ಎಂ’ ಅಡಿಯಲ್ಲಿ ಎಚ್.ಪಿ.ಕೆ.ಜಿ.ಎಸ್. ವಿಶೇಷ ಮಕ್ಕಳ ಶಾಲೆ ನಂಬರ್–4 ಅನ್ನು ದತ್ತು ಪಡೆದ ಕಾರಣ ಮತ್ತು ಅಲ್ಲಿ ಪೂರೈಸಿದ ಅವಶ್ಯಕತೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಶಿವಲೀಲಾ ಅಕ್ಕಿ ನೆರವೇರಿಸಿದರು. ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಶ್ರೇಯಾ ಪವಾಡಶೆಟ್ಟರ, ಸರೋಜಾ ಆಲೂರ, ಶಾಂತಾ ನಿಂಬಣ್ಣವರ, ಅನ್ನಪೂರ್ಣಾ ವರವಿ ಭಾಗವಹಿಸಿದ್ದರು. ಜಯಶ್ರೀ ಉಗಲಾಟ, ಶಾರದಾ ಸಜ್ಜನರ, ಪುಷ್ಪಾ ಭಂಡಾರಿ, ಪೂಜಾ ಭೂಮಾ, ವೀಣಾ ಕಾವೇರಿ, ಶಿಲ್ಪಾ ಅಕ್ಕಿ, ಸಾಗರಿಕಾ ಅಕ್ಕಿ, ಪವಿತ್ರಾ ಬಿರಾದರ ಉಪಸ್ಥಿತರಿದ್ದರು.
ಬಾಗಲಕೋಟೆಯಿಂದ ದತ್ತು ಶಾಲೆಗಳ ವೀಕ್ಷಣೆಗೆ ಮತ್ತು ಹ್ಯಾಪಿ ಸ್ಕೂಲ್ ಘೋಷಣೆಗೆ ಆಗಮಿಸಿದ ಡಿಸ್ಟ್ರಿಕ್ಟ್ ಎಡಿಟರ್ ಗೀತಾ ಗಿರಿಜಾ ಮಾತನಾಡಿ, “ವಿಶೇಷ ಚೇತನ ಮಕ್ಕಳು ಎಂದರೆ ಅವರು ದೇವರ ಮಕ್ಕಳು. ಅವರ ಸೇವೆ ಮಾಡುವ ಸೌಭಾಗ್ಯ ಯೋಗ್ಯರಿಗೆ ಮಾತ್ರ ಸಿಗುವುದು. ಆ ಸೌಭಾಗ್ಯವನ್ನು ಪಡೆದ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಸದಸ್ಯರು ಧನ್ಯರು. ಈ ವಿಶೇಷವಾದ ಶಾಲೆಯನ್ನು ದತ್ತು ಪಡೆದು ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದು ಸಂತಸದ ಸಂಗತಿ” ಎಂದರಲ್ಲದೆ, ಸದಾ ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ದಂಡಿನರಿಗೆ ಧನ್ಯವಾದ ತಿಳಿಸಿದರು.


