ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೃಷಿಕ್ರಾಂತಿ, ಹಸಿರು ಕ್ರಾಂತಿಯ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಈ ಬಗ್ಗೆ ಕೃಷಿ ವಿ.ವಿಗಳು ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ಹುಡುಕಿ ರೈತಸ್ನೇಹಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ, ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಆಹಾರದ ಫಲವತ್ತತೆ ಕಡಿಮೆ ಆಗುತ್ತಾ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ. ಇದನ್ನು ಕೃಷಿ ವಿವಿಗಳು ಗಂಭೀರವಾಗಿ ಪರಿಗಣಿಸಬೇಕು. ಜನಸಂಖ್ಯೆ ಬೆಳೆದ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ ಎಂದರು.
ಸಚಿವ ಸಂತೋಷ ಲಾಡ್ ಮಾತನಾಡಿ, ರಾಜ್ಯದಲ್ಲಿ ಸುಮಾರು 55 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಿದರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಸುಮಾರು 83 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ. ಅಂದಾಜು 65 ಸಾವಿರ ಕೋಟಿ ರೂ.ಗಳ ಅನುದಾನವನ್ನು ಶಿಕ್ಷಣ ವಲಯಕ್ಕೆ ವೆಚ್ಚ ಮಾಡಲಾಗುತ್ತಿದೆ. ನೌಕರರ ವೇತನ ಮತ್ತು ಬಡವರಿಗೆ, ಅಂಗವಿಕಲರಿಗೆ, ವೃದ್ದಾಪ್ಯ ವೇತನ, ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ 1.20 ಲಕ್ಷ ಕೋಟಿ ಅನುದಾನ ವೆಚ್ಚ ಮಾಡಲಾಗುತ್ತಿದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಎನ್.ಎಚ್. ಕೋನರಡ್ಡಿ, ಅಬ್ಬಯ್ಯ ಪ್ರಸಾದ್, ವಿಜಯಾನಂದ ಕಾಶಪ್ಪನವರ, ಯಾಶೀರ ಅಹ್ಮದ ಪಠಾಣ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಜಿ.ಎಸ್. ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೇರಿದಂತೆ ಜನಪ್ರತಿನಿಧಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.
ಕೃಷಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೃವಿವಿಯ ವಿವಿಧ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು.
ಪ್ರತಿಯೊಬ್ಬರೂ ಪ್ರಗತಿಪರ ರೈತರಾಗಬೇಕು. ಕರ್ನಾಟಕದಲ್ಲಿ ಮಳೆ ಆಧಾರಿತ ಕೃಷಿ ಇದೆ. ನೀರಾವರಿ ಆಧಾರಿತ ಶೇ.40ಕ್ಕಿಂತ ಕಡಿಮೆ ಭೂಮಿ ಇದೆ. ಶೇ.60ರಷ್ಟು ಭೂಮಿ ಮಳೆ ಆಶ್ರಿತವಾಗಿದೆ. ಇಂತಹ ಭೂಮಿಗೆ ಒಗ್ಗುವ ಬೀಜ, ಬೆಳೆ ಸಂಶೋಧನೆ ಆಗಬೇಕು. ಹೊಸ ಬೀಜ, ತಂತ್ರಜ್ಞಾನ ಸಿಗಬೇಕು. ಅದನ್ನು ರೈತರಿಗೆ ತಲುಪಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.