ಬೆಂಗಳೂರು:- ಲಂಚ ಪಡೆದು ಸಿಕ್ಕಿಬಿದ್ದ ಬೆಂಗಳೂರು, ಬೀದರ್, ಮಂಡ್ಯದ ಮೂವರು ವೈದ್ಯರನ್ನು ಅಮಾನತು ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ, ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶರೀರ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಚೈತ್ರ ಎಂ.ಎಸ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂಳೆ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಮಂಜಪ್ಪ ಸಿ.ಎನ್, ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶೋಕ್ ಸೆಲ್ಕೆ ಅವರನ್ನು ಅಮಾನತುಗೊಳಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಸೀನ್ ಆದೇಶ ಹೊರಡಿಸಿದ್ದಾರೆ.
ಲಂಚ ಸ್ವೀಕಾರ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿದೆ ಎಂದು ವರದಿ ಮಾಡಿದೆ. ಈ ಕುರಿತು ಸಿಬಿಐ ಇಲಾಖೆಗೆ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಈ ಮೂವರ ಅಮಾನತಿಗೆ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.