ಮಂಗಳೂರು:- ಧರ್ಮಸ್ಥಳದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿನ್ನಯ್ಯನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ಕೋರ್ಟ್ ವಜಾ ಮಾಡಿದೆ.
ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ಹಲವಾರು ಕೊಲೆ ಮತ್ತು ಅತ್ಯಾಚಾರಗಳು ನಡೆದಿದ್ದು, ನಾನೇ ಆ ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ, ಈಗ ಜೈಲು ಪಾಲಾಗಿರುವ ಸಿ ಎನ್ ಚಿನ್ನಯ್ಯನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.
ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನನ್ನು ಇಂದು (ಮಂಗಳವಾರ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. “ಅನಾರೋಗ್ಯ” ಮತ್ತು “ಕೌಟುಂಬಿಕ ಜವಾಬ್ದಾರಿಗಳ” ಆಧಾರದ ಮೇಲೆ ಜಾಮೀನು ಕೋರಿ ಚಿನ್ನಯ್ಯ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ನೀಡದಂತೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಅವರು ಚಿನ್ನಯ್ಯನ ಜಾಮೀನು ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನೂ ಧರ್ಮಸ್ಥಳದ ಸುತ್ತಮುತ್ತ ನೂರಾರು ಶವ ಹೂತಿದ್ದಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಆರೋಪಿಸಿದ್ದು, ಬಳಿಕ ಎಸ್ಐಟಿ ತನಿಖೆ ವೇಳೆ ಯಾವುದೇ ಮನುಷ್ಯನ ಕಳೇಬರಹಗಳು ಪತ್ತೆಯಾಗಿಲ್ಲ. ಬಳಿಕ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನೇ ಬಂಧಿಸಿ ಆತನನಿಂದ ಮಹತ್ವದ ಮಾಹಿತಿ ಸಂಗ್ರಹಿಸಿ ಜೈಲಿಗಟ್ಟಿದ್ದಾರೆ. ಇತ್ತ ಚಿನ್ನಯ್ಯ ಸಹ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.


