ಉಚ್ಚಂಗಿದುರ್ಗದಲ್ಲಿ ನಡೆದ ಜನಾಭಿಪ್ರಾಯ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ: ಮೂಡದ ಒಮ್ಮತ

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿಯನ್ನು ದಾವಣಗೆರೆ ಜಿಲ್ಲೆಗೆ ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಉಚ್ಚಂಗಿದುರ್ಗದ ಹಾಲಮ್ಮನ ತೋಪಿನಲ್ಲಿ ಕರೆದಿದ್ದ ವಿವಿಧ ಸಂಘಟನೆಗಳ ಮುಖಂಡರ ಜನಾಭಿಪ್ರಾಯ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಅರಸೀಕೆರೆ, ಉಚ್ಚಂಗಿದುರ್ಗ, ಹೊಸಕೋಟೆ, ತೌಡೂರು, ಪುಣಭಗಟ್ಟ, ಅಣಜಿಗೆರೆ, ಚಟ್ನಿಹಳ್ಳಿ, ಹಿರೇಮೇಗಳಗೆರೆ, ಕಂಚಿಕೆರೆ, ಲಕ್ಷ್ಮೀಪುರ, ಮತ್ತು ಶಿಂಗ್ರಿಹಳ್ಳಿ, ಒಟ್ಟು 11 ಪಂಚಾಯಿತಿಗಳನ್ನು ದಾವಣಗೆರೆ ಜಿಲ್ಲೆಗೆ ಸೇರಿಸಲು ಕರೆದಿದ್ದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ.

ಅರಸೀಕೆರೆ ಹೋಬಳಿಯ 7 ಗ್ರಾಮ ಪಂಚಾಯಿತಿಗಳು ವಿಧಾನಸಭಾ ಕ್ಷೇತ್ರ ಜಗಳೂರಿಗೆ ಒಳಪಟ್ಟರೆ, ಉಳಿದ ಪಂಚಾಯಿತಿಗಳು ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಹರಿದು ಹಂಚಿರುವ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೂ ಒಳಗಾಗಿವೆ.

ಈ ಭಾಗದ ಜನತೆ ಎರಡು ತಾಲೂಕುಗಳ ಮಲತಾಯಿ ಧೋರಣೆಯಿಂದ ಬೇಸತ್ತು ಹೋಗಿದ್ದು, ಉಚ್ಚಂಗಿದುರ್ಗ ಅಥವಾ ಅರಸೀಕೆರೆ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಮಾಡಿಕೊಂಡು 11 ಪಂಚಾಯಿತಿಗಳ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೆಲವರು ತಿಳಿಸಿದರೆ, ಇನ್ನೂ ಕೆಲವರು ದಾವಣಗೆರೆಯು ವ್ಯವಹಾರಿಕವಾಗಿ ಮತ್ತು ಭಾವನಾತ್ಮಕವಾಗಿ ಈ ಭಾಗದ ಜನತೆಯೊಂದಿಗೆ ಬೆಸೆದುಕೊಂಡಿದ್ದು ದಾವಣಗೆರೆ ತಾಲೂಕಿಗೆ ಸೇರ್ಪಡೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಹೋಬಳಿ ವ್ಯಾಪ್ತಿಯ ಹಿರೇಮೇಗಳಗೆರೆ, ಚಿಕ್ಕಮೇಗಳಗೆರೆ, ಜಂಬುಲಿಂಗನಹಳ್ಳಿ ಸೇರಿ ಹಲವು ಗಡಿಭಾಗದ ಹಳ್ಳಿಗಳು ದಾವಣಗೆರೆಗೆ ಕೇವಲ 7ರಿಂದ 8 ಕಿಮಿ ಅಂತರವಿದ್ದು, ತಾಲೂಕು ಕೇಂದ್ರ ಹರಪನಹಳ್ಳಿ 45 ಕಿ.ಮೀ, ಜಿಲ್ಲಾ ಕೇಂದ್ರ 110 ಕಿ.ಮೀ ದೂರದಲ್ಲಿದೆ. ಇದರಿಂದ ಜನಸಾಮಾನ್ಯರು ಕೆಲಸಕ್ಕೆ ಅಲೆದಾಡುತ್ತಿದ್ದಾರೆ ಎಂಬ ವಾದವನ್ನು ಮಂಡಿಸಿದರು.

2018ರಲ್ಲಿ ದಾವಣಗೆರೆಯಿಂದ ಬೇರ್ಪಟ್ಟು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ್ದರಿಂದ ನಮಗೆ ಹೆಚ್ಚಿನ ಅನುದಾನ ಸಿಗುತ್ತಿದೆ. 371(ಜೆ) ಪ್ರಮಾಣಪತ್ರ ಸೌಲಭ್ಯದಿಂದಾಗಿ ಶಿಕ್ಷಣ, ಉದ್ಯೋಗದಲ್ಲಿ ಈ ಭಾಗದ ಮಕ್ಕಳು ಉನ್ನತ ಶಿಕ್ಷಣ, ಉನ್ನತ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗಿದೆ. ಹಾಗಾಗಿ ಅರಸೀಕೆರೆ ಅಥವಾ ಉಚ್ಚಂಗಿದುರ್ಗವನ್ನು ಪ್ರತ್ಯೇಕ ತಾಲೂಕು ರಚನೆಗೆ ಹೋರಾಟ ಮಾಡುವುದು ಸೂಕ್ತವೆಂದು ಕೆಲ ಮುಖಂಡರು ಅಭಿಪ್ರಾಯಪಟ್ಟರು.

ನಂಜುಂಡಪ್ಪ ವರದಿಯನ್ವಯ ಹರಪನಹಳ್ಳಿ ತಾಲೂಕು ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದ್ದು, ಕ್ಷೇತ್ರದಲ್ಲಿ ಬಡ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಗೆ ಬಳ್ಳಾರಿಗೆ ಸೇರಿಸಲು ವಿವಿಧ ಸಂಘಟನೆಗಳು, ಸ್ಥಳೀಯ ಮಠಾಧೀಶರು, ಎಲ್ಲಾ ರಾಜಕೀಯ ಮುಖಂಡರು ಹೋರಾಟ ಮಾಡಿದ ಫಲವಾಗಿ ಹರಪನಹಳ್ಳಿಯು 371(ಜೆ) ಸೌಲಭ್ಯ ಪಡೆದು ಇಂದು ಅರಸೀಕೆರೆ ಹೋಬಳಿ ಸೇರಿದಂತೆ ಎಲ್ಲಾ ವರ್ಗದ ಜನರೂ ಇದರ ಸಂಪೂರ್ಣ ಸೌಲಭ್ಯ ಪಡೆದು ಅಭಿವೃದ್ಧಿಯತ್ತ ಸಾಗುತ್ತಿರುವಾಗಲೇ ಪ್ರತ್ಯೇಕ ತಾಲೂಕಿನ ಕೂಗು ಕೇಳಿಬಂದಿದೆ.

“ಉಚ್ಚಂಗಿದುರ್ಗ ಭಾಗದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗಣಿ ಉದ್ಯಮವನ್ನು ಮಾಡಿಕೊಂಡಿದ್ದಾರೆ. ಅವರ ಬಂಡವಾಳ ಹೆಚ್ಚಿಸಿಕೊಳ್ಳಲು ದಾವಣಗೆರೆ ಜಿಲ್ಲೆಗೆ ಸೇರಬೇಕೆಂಬುದು ಕೇವಲ ಬೆರಳಣಿಕೆಯಷ್ಟು ಜನರ ಕೂಗಾಗಿದೆ. ಅವರಿಗೆ ಶ್ರೀಸಾಮಾನ್ಯರ ಅಭಿವೃದ್ಧಿ ಬೇಕಾಗಿಲ್ಲ. 371(ಜೆ) ಸೌಲಭ್ಯದಿಂದ ಅರಸೀಕೆರೆ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಅಂತಹವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ದಾವಣಗೆರೆ ಅಥವಾ ಪ್ರತ್ಯೇಕ ತಾಲೂಕು ಮಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಸದ್ಯದಲ್ಲೇ ಮನವಿ ಸಲ್ಲಿಸುತ್ತೇನೆ”
ವೈ. ದೇವೇಂದ್ರಪ್ಪ, ಅರಸೀಕೆರೆ.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಎಲ್ಲರಿಗೂ ಅಧಿಕಾರವಿದೆ. ಅರಸೀಕೆರೆ-ಉಚ್ಚಂಗಿದುರ್ಗ ಭಾಗದ ಜನರ ಪ್ರತ್ಯೇಕ ತಾಲೂಕಿನ ಹೋರಾಟದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ”
ಬಿ. ದೇವೇಂದ್ರಪ್ಪ,
ಜಗಳೂರು ಶಾಸಕರು.

“ಮತದಾನ ಜಗಳೂರು ಹಾಗೂ ಆಡಳಿತಾತ್ಮಕವಾಗಿ ಹರಪನಹಳ್ಳಿಗೆ ಸೇರಿರುವ ಅರಸೀಕೆರೆ ಹೋಬಳಿಯ ಗ್ರಾಮ ಪಂಚಾಯಿತಿಗಳು ಹಲವಾರು ದಶಕಗಳಿಂದ ಅಬಿವೃದ್ಧಿ ಕಾಣದೆ ಸಾಕಷ್ಟು ತೊಂದರೆ ಅನುಭವಿಸಿದ್ದು ಅನಿವಾರ್ಯವಾಗಿ ಸಂಕಷ್ಟಕ್ಕೆ ಸಿಲುಕಿವೆ. ಈ ಎರಡೂ ತಾಲೂಕುಗಳ ಮಲತಾಯಿ ಧೋರಣೆಯ ಕೊಂಡಿಯಿಂದ ಕಳಚಿ ಪ್ರತ್ಯೇಕ ತಾಲೂಕು ಆದರೆ ನಮಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಲಿದೆ”
ಕೆಂಚಪ್ಪ ಕೆ., ಉಚ್ಚಂಗಿದುರ್ಗ,
ಗ್ರಾಮಸ್ಥರು.

 


Spread the love

LEAVE A REPLY

Please enter your comment!
Please enter your name here