ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ನಡೆಸಲಿರುವ ಹೊಸ ಜಾತಿಗಣತಿ ಮತ್ತು ಅದರಲ್ಲಿನ ಅಂಶಗಳು ಸಮಾಜವನ್ನು ಒಡೆಯುವ ಹುನ್ನಾರದಿಂದ ಕೂಡಿದೆ ಎಂದು ಆರೋಪಿಸಿ, ಸೆಪ್ಟೆಂಬರ್ 18ರಂದು ಸಾಮರಸ್ಯ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಪ್ರಮುಖ ರವಿಕಾಂತ ಅಂಗಡಿ ತಿಳಿಸಿದರು.
ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಪ್ರತಿಭಟನೆ ಆರಂಭವಾಗಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು. ಈ ಸಮೀಕ್ಷೆಯಲ್ಲಿ ಹಲವಾರು ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಎಂದು ನಮೂದಿಸಿರುವುದು ಅಕ್ಷಮ್ಯ ಅಪರಾಧ. ಈ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ನರಸಾಪುರ ಅನ್ನದಾನೇಶ್ವರ ಮಠದ ಅನ್ನದಾನೇಶ ಶ್ರೀಗಳು ಹಾಗೂ ಗಜೇಂದ್ರಗಡ ತಾಲೂಕಿನ ಕಾಲಜ್ಞಾನ ಮಠದ ಶ್ರೀಗಳು ಮಾತನಾಡಿ, ಸರ್ಕಾರದ ಈ ನಡೆಗೆ ಎಲ್ಲಾ ಸಮಾಜಗಳ ಮಠಾಧೀಶರು ಮತ್ತು ಜಾತಿವಾರು ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ದಸರಾ-ನವರಾತ್ರಿ ಸಂದರ್ಭದಲ್ಲಿಯೇ ಸಮೀಕ್ಷೆ ನಡೆಸುವುದು ಸರ್ಕಾರದ ದುರುದ್ದೇಶವನ್ನು ತೋರಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರೇವಡ್ಡಟ್ಟಿ ಶ್ರೀ ಶರಣ ಬಸವ ಶ್ರೀಗಳು, ತಳ್ಳಿಹಾಳ ಸಂಸ್ಥಾನ ಮಠದ ಡಾ. ಚನ್ನವೀರೇಶ್ವರ ಶ್ರೀಗಳು, ವಾಲ್ಮೀಕಿ ಸಮುದಾಯದ ಜಗದೀಶ್ ಎಸ್.ಪಿ., ಭೀಮನಗೌಡ ಪಾಟೀಲ, ರಾಮಚಂದ್ರ ಮೋನೆ, ಕುಮಾರ ಬೆಂತೂರಮಠ, ವಂದನಾ ವರ್ಣೇಕರ, ಉಡಚಪ್ಪ ಹಳ್ಳಿಕೇರಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ವೇದಿಕೆಯ ಸದಸ್ಯ ವೆಂಕಟೇಶ ಕುಲಕರ್ಣಿ ಮಾತನಾಡಿ, ಕ್ರಿಶ್ಚಿಯನ್ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಮಾತ್ರ ನಮೂದಿಸಲು ಅವಕಾಶ ನೀಡಿದ್ದು, ಲಿಂಗಾಯತ, ಒಕ್ಕಲಿಗ, ಕುರುಬ, ನೇಕಾರ, ಮಡಿವಾಳ, ಬಿಲ್ಲವ, ಕುಂಬಾರ, ಮಾದಿಗ, ಹೊಲೆಯ, ವಡ್ಡ ಸೇರಿದಂತೆ 50ಕ್ಕೂ ಹೆಚ್ಚು ಪ್ರಮುಖ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ಸೇರಿಸಲಾಗಿದೆ. ಇದು ಏಕಾಏಕಿ ಹೊಸ ಜಾತಿಗಳನ್ನು ಸೃಷ್ಟಿಸುವ ಹುನ್ನಾರ. ಹಿಂದೂ ಸಮಾಜದಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದರು.



