ಬೆಂಗಳೂರು:- ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ.
ಮುಡಾದ ಸೈಟ್ ಹಂಚಿಕೆ ಹಗರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಕೋರ್ಟ್ 9 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ. ಮಂಗಳವಾರ ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದ ದಿನೇಶ್ ಕುಮಾರ್ ಅವರನ್ನು ಇಡಿ ಬಂಧಿಸಿತ್ತು. ರಾತ್ರಿ ನ್ಯಾಯಾಧೀಶರ ಮನೆ ಹಾಜರು ಪಡಿಸಿ 1 ದಿನ ಕಸ್ಟಡಿಗೆ ಪಡೆದುಕೊಂಡಿದ್ದ ಇಡಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿತು.
ವಿಚಾರಣೆ ಸಮಯದಲ್ಲಿ ದಿನೇಶ್ ಕುಮಾರ್ ಪರವಾಗಿ ಹಾಜರಾದ ವಕೀಲರು, ಒಂದು ವರ್ಷದಿಂದ ಸುಮ್ಮನಿದ್ದ ಇಡಿ ಅಧಿಕಾರಿಗಳು ಈಗ ತನಿಖೆಗೆ ದಿನೇಶ್ ಬೇಕು ಎನ್ನುತ್ತಿದ್ದಾರೆ. ಇಷ್ಟು ದಿನ ಬಂಧನ ಮಾಡದೇ ಇದ್ದವರನ್ನು ಈಗ ಬಂಧಿಸಿದ್ದು ಯಾಕೆ? ಈಗಾಗಲೇ ಬ್ಯಾಂಕ್ ವಿವರಗಳನ್ನು ಎಲ್ಲವನ್ನೂ ನೀಡಿದ್ದು ಈಗ ಮತ್ತೆ ಕಸ್ಟಡಿಗೆ ಕೇಳುವುದು ಸರಿಯಲ್ಲ ಎಂದು ವಾದಿಸಿದರು.
ಇಡಿ ಪರ ವಕೀಲರು, ನಮಗೆ ತನಿಖೆಗೆ ಬೇಕಾದ ಅಗತ್ಯ ದಾಖಲೆಗಳು ಸಿಕ್ಕಿದ್ದು 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಎರಡು ಕಡೆಯ ವಾದ ಆಲಿಸಿದ ಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.



