ಇರುವೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಶವವಾಗಿ ಪತ್ತೆ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಯಾಸ ಹಡಗಲಿ ಹಾಗೂ ಕೌಜಗೇರಿ ಗ್ರಾಮದ ನಡುವಿನ ಇರುವೆ ಹಳ್ಳಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಕಿರಿಯ ಆರೋಗ್ಯ ಸಹಾಯಕಿ ಬಸಮ್ಮ ಗುರಿಕಾರ (32) ಬುಧವಾರ ಬೆಳಗಿನ ಜಾವ ಇರುವೆ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ತಾಲೂಕಿನ ಬೆಳವಣಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸಮ್ಮ ಗುರಿಕಾರ ಕರ್ತವ್ಯದ ನಿಮಿತ್ತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲು ಯಾಸ ಹಡಗಲಿ ಗ್ರಾಮಕ್ಕೆ ತೆರಳಿದ್ದರು. ಕರ್ತವ್ಯ ಮುಗಿಸಿ ವಾಪಸ್ ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವಾಗ ಇರುವೆ ಹಳ್ಳದ ರಭಸಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಮಂಗಳವಾರ ಯಾಸ ಹಡಗಲಿ ಗ್ರಾಮದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರಕ್ಕೆ ಬಸಮ್ಮ ಗುರಿಕಾರ ಸಹ ತೆರಳಿದ್ದರು. ಆದರೆ ಅಂದು ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಮಳೆ ಸುರಿಯತೊಡಗಿತು. ಆಗ ಆಸ್ಪತ್ರೆಯ ಸಮುದಾಯ ಆರೋಗ್ಯಾಧಿಕಾರಿ ಬಸವರಾಜ ಕಡಪಟ್ಟಿ, ಹಿರಿಯ ಆರೋಗ್ಯಾಧಿಕಾರಿ ವೀರಸಂಗಯ್ಯ ಹಿರೇಮಠ ಇವರುಗಳ ಜೊತೆಯಲ್ಲಿ ಬೈಕ್ ಮೂಲಕ ಬಸ್ಸಮ್ಮ ಗುರಿಕಾರ ಸಹ ಆಗಮಿಸಿದ್ದರು. ಇವರು ಬರುತ್ತಿದ್ದಂತೆ ಇರುವೆ ಹಳ್ಳದಲ್ಲಿ ನೀರಿನ ಮಟ್ಟ ಏರತೊಡಗಿದ್ದು, ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಬಸಮ್ಮ ಗುರಿಕಾರ ಹಳ್ಳದಲ್ಲಿ ತೇಲಿ ನಾಪತ್ತೆಯಾಗಿದ್ದರು.

ಪುರುಷ ಸಿಬ್ಬಂದಿಗಳಿಬ್ಬರೂ ಈಜಿ ದಡ ಸೇರಿದ್ದರು. ಮಂಗಳವಾರ ಸಂಜೆ ಮಹಿಳಾ ಸಿಬ್ಬಂದಿಯ ಪತ್ತೆಗಾಗಿ ಪೊಲೀಸ್, ಎನ್‌ಡಿಆರ್‌ಎಫ್, ಅಗ್ನಿಶಾಮಕ, ಕಂದಾಯ ಇಲಾಖೆ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಆದರೆ ಕತ್ತಲು ಆವರಿಸಿದ್ದರಿಂದ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಿಗ್ಗೆ ಪುನಃ ಶೋಧ ನಡೆಸಿದಾಗ ಹಳ್ಳದಲ್ಲಿದ್ದ ಜಾಲಿ ಕಂಟೆಯ ಪೊದೆಯಲ್ಲಿ ಬಸಮ್ಮ ಗುರಿಕಾರ ಶವವಾಗಿ ಪತ್ತೆಯಾದರು.

ಸಹೋದ್ಯೋಗಿಯ ದುರಂತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಳವಣಕಿ ಮತ್ತು ರೋಣ ಸರಕಾರಿ ಆಸ್ಪತ್ರೆಗಳಲ್ಲಿ ಮೌನ ಆವರಿಸಿತು. ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳು ಬಸ್ಸಮ್ಮ ಗುರಿಕಾರರ ಅಂತಿಮ ದರ್ಶನ ಪಡೆದರು.

ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯ ಸಾವಿನ ಸುದ್ದಿ ನಿಜಕ್ಕೂ ನೋವು ತರಿಸಿದೆ. ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಇನ್ನು ಗಾಯಾಳು ಸಿಬ್ಬಂದಿಗಳು ಸಹ ಶೀಘ್ರ ಚೇತರಿಸಿಕೊಳ್ಳಲಿ. ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರ ಮತ್ತು ಸಿಬ್ಬಂದಿಗಳ ಸೇವೆ ಸದಾ ಸ್ಮರಣೀಯ”

ಜಿ.ಎಸ್. ಪಾಟೀಲ.
ಶಾಸಕರು, ರೋಣ.


Spread the love

LEAVE A REPLY

Please enter your comment!
Please enter your name here